ಹೈದ್ರಾಬಾದ್(ತೆಲಂಗಾಣ) :ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಕಾರಣಕ್ಕೆ 100ಕ್ಕೂ ಅಧಿಕ ನಾಯಿಗಳಿಗೆ ವಿಷಕಾರಿ ಇಂಜೆಕ್ಷನ್ ಕೊಟ್ಟು ಸಾಯಿಸಲಾಗಿದೆ. ಅಲ್ಲದೇ, ಮೃತ ನಾಯಿಗಳನ್ನು ಹಳೆಯ ಬಾವಿಗಳಲ್ಲಿ ಹೂತು ಹಾಕಲಾಗಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಈ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಜಗದೇವಪುರ ವಲಯದ ತಿಗುಲ್ ಗ್ರಾಮದಲ್ಲಿ ನಾಯಿಗಳ ಹಾವಳಿ ಬಗ್ಗೆ ಗ್ರಾಮಸ್ಥರು ಪಂಚಾಯತ್‌ಗೆ ಪದೇಪದೆ ದೂರು ಕೊಡುತ್ತಿದ್ದರು. ಇದೇ ಕಾರಣಕ್ಕೆ ಪಂಚಾಯತ್‌ನವರು ನಾಯಿಗಳಿಗೆ ವಿಷದ ಚುಚ್ಚುಮದ್ದು ಕೊಡಿಸಿದ್ದಾರೆ. ಗ್ರಾಮಸ್ಥರೊಬ್ಬರು ತಮ್ಮ ಮುದ್ದು ನಾಯಿ ಸಾವನ್ನಪ್ಪಿರುವ ಬಗ್ಗೆ ಹೈದರಾಬಾದ್‌ನ ಸ್ಟೇ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ ಆಫ್ ಇಂಡಿಯಾ ಚಾರಿಟಿಗೆ ಮಾಹಿತಿ ನೀಡಿದ್ದರು. ಚಾರಿಟಿಯ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿದಾಗ ಭಯಂಕರ ಕೃತ್ಯ ಬಯಲಾಗಿದೆ.
ಏನಿದರ ಹಿನ್ನೆಲೆ? :ನಾಯಿ ಸಾವನ್ನಪ್ಪಿರುವ ವಿಷಯ ತಿಳಿದಿದ್ದ ಚಾರಿಟಿಯ ಸದಸ್ಯರಾದ ಶಶಿಕಲಾ ಮತ್ತು ಗೌತಮ್ ಕಳೆದ ರವಿವಾರ ರಾತ್ರಿ ತಿಗುಲ್ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ನಾಯಿಗಳ ಕುರಿತಂತೆ ವಿಚಾರಣೆ ನಡೆದಾಗ ನಾಯಿಗಳ ಬಗ್ಗೆ ಪಂಚಾಯತ್‌ಗೆ ಗ್ರಾಮಸ್ಥರು ಪದೇಪದೆ ನೀಡಿರುವ ಮಾಹಿತಿ ಲಭ್ಯವಾಗಲಿದೆ. ಹೀಗಾಗಿ, ಇಲ್ಲಿನ ಸರಪಂಚ್ ಕಪ್ಪರ ಭಾನುಪ್ರಕಾಶ್ ರಾವ್ ಮತ್ತು ಪಂಚಾಯತ್ ಕಾರ್ಯದರ್ಶಿ ರಾಜ್‌ಗೋಪಾಲ್ ನಾಯಿಗಳಿಗೆ ವಿಷಕಾರಿ ಇಂಜೆಕ್ಷನ್ ಕೊಡಿಸಿ, ಅವುಗಳನ್ನು ಹಳೆಯ ಬಾವಿಗಳಲ್ಲಿ ಹೂತು ಹಾಕಿಸಿದ್ದರು ಎಂಬ ಮಾಹಿತಿಯೂ ಹೊರ ಬಿದ್ದಿದೆ.
ಈ ಕುರಿತು ಜಗದೇವಪುರ ಠಾಣೆಗೆ ಚಾರಿಟಿಯ ಪ್ರತಿನಿಧಿಗಳು ದೂರು ನೀಡಲು ಹೋದಾಗ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. ಆದ್ದರಿಂದ ಅವರು ರಾಷ್ಟ್ರೀಯ ಪ್ರಾಣಿ ಕಲ್ಯಾಣ ಸಂಸ್ಥೆಯ ಪ್ರತಿನಿಧಿಯಾದ ಮೇನಕಾ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ. ಅಂತೆಯೇ, ಸದ್ಯ ನಾಯಿಗಳ ಸಾವಿನ ಕುರಿತಂತೆ ಪಂಚಾಯತ್ ಕಾರ್ಯದರ್ಶಿ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:ಅತ್ತೆ,ಪತ್ನಿ,ಇಬ್ಬರು ಮಕ್ಕಳ ಕೊಂದು ಆರೋಪಿ ಪರಾರಿ.. ದುರ್ವಾಸನೆ ಮೂಲಕ ಬೆಳಕಿಗೆ ಬಂದ ಮರ್ಡರ್ ಕೇಸ್!