ಚಮೋಲಿ (ಉತ್ತರಾಖಂಡ):ಉತ್ತರಾಖಂಡದ ಚಮೋಲಿಯಲ್ಲಿ ಇಂದು ಬೆಳಗ್ಗೆ ಭೀಕರ ದುರಂತ ಸಂಭವಿಸಿದೆ. ಅಲಕನಂದಾ ನದಿ ದಡದಲ್ಲಿ ನಮಾಮಿ ಗಂಗೆ ಯೋಜನೆಯ ನಿರ್ಮಾಣ ಹಂತದಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ವಿದ್ಯುತ್ಪರಿವರ್ತಕ (ಟ್ರಾನ್ಸಫಾರ್ಮರ್) ಸ್ಫೋಟವಾಗಿ, 15 ಮಂದಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಸಿಕ್ಕಿದೆ. ವಿದ್ಯುತ್ ಸ್ಪರ್ಶಕ್ಕೆ 20 ರಿಂದ 25 ಜನರು ಪ್ರಾಣ ಕಳೆದುಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಭಾರೀ ಭೀಕರವಾಗಿದ್ದು, ಕೆಲ ದೇಹಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಪಿಪಾಲಕೋಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ದುರ್ಘಟನೆಯಲ್ಲಿ ಈವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಟ್ರಾನ್ಸ್ಫಾರ್ಮರ್ ಸ್ಫೋಟವಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಹಾರ ಕೂಡ ಘೋಷಣೆ ಮಾಡಬಹುದು ಎಂದು ಚಮೋಲಿ ಜಿಲ್ಲಾ ಉಸ್ತುವಾರಿ ಸಚಿವ ಧನ್ಸಿಂಗ್ ರಾವತ್ ತಿಳಿಸಿದ್ದಾರೆ.
ಚಮೋಲಿಯ ಅಲಕನಂದಾ ನದಿಯ ದಡದಲ್ಲಿ ನಮಾಮಿ ಗಂಗೆ ಯೋಜನೆಯಡಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ಓರ್ವ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿತ್ತು. ಆತನನ್ನು ರಕ್ಷಿಸಲು ಹೋದವರೂ ಕರೆಂಟ್ ಶಾಕ್ಗೆ ಒಳಗಾಗಿದ್ದರು.