ಲಖನೌ(ಉತ್ತರಪ್ರದೇಶ) :43 ವರ್ಷಗಳ ಹಿಂದೆ ಅಂದರೆ 1980 ರಲ್ಲಿ ನಡೆದ ಮೊರಾದಾಬಾದ್ ಗಲಭೆಯಲ್ಲಿ 80 ಕ್ಕೂ ಅಧಿಕ ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ನನೆಗುದಿಗೆ ಬಿದ್ದಿದ್ದ ಸಂಘರ್ಷಕ್ಕೆ ಸಂಬಂಧಿಸಿದ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಸದನದಲ್ಲಿ ಮಂಡಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.
ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಮೊರಾದಾಬಾದ್ ಗಲಭೆಗೆ ಸಂಬಂಧಿಸಿದ ವರದಿಯನ್ನು ಸದನದಲ್ಲಿ ಮಂಡಿಸಿದರು. ಗಲಭೆ ನಡೆದು 43 ವರ್ಷ ಕಳೆದರೂ ಈ ಬಗ್ಗೆ ಯಾವುದೇ ಸರ್ಕಾರಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಘಟನೆಯ ಮೇಲೆ ಬೆಳಕು ಚೆಲ್ಲಿದೆ.
ಮೂಲಗಳ ಪ್ರಕಾರ, ಮುಸ್ಲಿಂ ಲೀಗ್‌ನ ನಾಯಕನನ್ನು ಗಲಭೆಯಲ್ಲಿ ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, ಗಲಭೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದ ಪೊಲೀಸರಿಗೆ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಲಾಗಿದೆ ಎಂದು ತಿಳಿದುಬಂದಿದೆ. ವರದಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದು, ಮೊರಾದಾಬಾದ್ ಗಲಭೆಯ ವರದಿಯನ್ನು ಮಂಡಿಸಲಾಗಿದೆ. ಅಂದು ನಡೆದ ಹಾನಿಯ ಬಗ್ಗೆ ಈಗಲಾದರೂ ಜನರಿಗೆ ತಿಳಿಯಬೇಕು ಎಂದು ಹೇಳಿದರು.
ಸರ್ಕಾರ ಗಲಭೆಯ ವರದಿಯನ್ನು ಸದನದಲ್ಲಿ ಮಂಡಿಸಿದೆ. ಮೊರಾದಾಬಾದ್ ಗಲಭೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಅವಕಾಶ ರಾಜ್ಯ ಹಾಗೂ ದೇಶದ ಜನತೆಗೆ ಸಿಗಲಿದೆ. ಗಲಭೆ ಬಳಿಕ 15 ಮುಖ್ಯಮಂತ್ರಿಗಳು ಬದಲಾದರು. ಅವರು ಈ ಬಗ್ಗೆ ಚಕಾರವೇ ಎತ್ತಿಲ್ಲ. ಈ ಕುರಿತು ಅವರನ್ನು ಮೊದಲು ಪ್ರಶ್ನಿಸಬೇಕಿದೆ. ಯೋಗಿ ಸರ್ಕಾರದ ನಡೆ ಸ್ವಾಗತಾರ್ಹವಾಗಿದೆ. ಸತ್ಯ ಹೊರಬರಬೇಕಿದೆ ಎಂದರು.