ನವದೆಹಲಿ:ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮದೇ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿ ತಯಾರಿಸಲು ಅಧಿಕಾರ ನೀಡುವ ಮಹತ್ವದ ಒಬಿಸಿ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಒಪ್ಪಿಗೆ ನೀಡಲು ನಿರ್ಧರಿಸಿವೆ.
ಇಂದು ವಿರೋಧ ಪಕ್ಷಗಳ ನಾಯಕರು ಮಸೂದೆ ಸಂಬಂಧ ಸಭೆ ನಡೆಸಿದ್ದರು. ಸಂಸತ್ತಿನಲ್ಲಿ ಇಂದು ಮಂಡಿಸಲಾದ ಸದರಿ ಮಸೂದೆಯು ರಾಜ್ಯಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಶಕ್ತಿ ನೀಡುತ್ತದೆ. ಕಾರ್ಯತಂತ್ರದ ಸಭೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳ ಶಕ್ತಿಯನ್ನು ಪುನಃ ಸ್ಥಾಪಿಸುವುದಕ್ಕೋಸ್ಕರ ಮಸೂದೆ ಅಂಗೀಕರಿಸುವಲ್ಲಿ ಕೇಂದ್ರದೊಂದಿಗೆ ಸಹಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿದವು.
ಇದು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರ ಮರಳಿ ನೀಡುವ ತಿದ್ದುಪಡಿಯಾಗಿದೆ. ಮೇ 2021 ರಲ್ಲಿ ಸುಪ್ರೀಂಕೋರ್ಟ್ ಕೇಂದ್ರವು ಮಾತ್ರ ಹಾಗೆ ಮಾಡಬಹುದು ಎಂದು ತೀರ್ಪು ನೀಡಿತ್ತು. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಹಿಂದುಳಿದ ವರ್ಗಕ್ಕೆ ಸೇರಿದೆ. ಈ ಮಸೂದೆ ಮಂಡಿಸಿದ ದಿನವೇ ಅಂಗೀಕರಿಸಲಾಗುತ್ತದೆ ಎಂದು ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.