ನವದೆಹಲಿ:ಮುಂಗಾರು ಅಧಿವೇಶನವು ಹೊಸ ಸಂಸತ್ ಕಟ್ಟಡದಲ್ಲಿ ನಡೆಯುವ ನಿರೀಕ್ಷೆಯಿರುವುದರಿಂದ ನಿರ್ಮಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜುಲೈ 2023 ಕ್ಕೆ ಹೊಸ ಗಡುವನ್ನು ವಿಸ್ತರಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಈ ಹಿಂದೆ, ಸಂಸತ್ತಿನ ಬಜೆಟ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಬೇಕಿತ್ತು. ಕೆಲವು ಕಾಮಗಾರಿಗಳು ಇನ್ನೂ ಬಾಕಿ ಉಳಿದಿರುವುದರಿಂದ ಜುಲೈನಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಹೊಸ ಗಡುವು ನೀಡಲಾಗಿದೆ" ಎಂದು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ನಿಗದಿತ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಆದರೂ ಹೊಸ ಸಂಸತ್ತಿನ ಸ್ಥಿತಿಯನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:'ವಿಶ್ವನಾಯಕನ ವನ್ಯಜೀವಿ ಕಾಳಜಿ': ಮೋದಿ ಬಂಡೀಪುರ ಭೇಟಿಗೆ ಕೆವಿನ್ ಪೀಟರ್ಸನ್ ಮೆಚ್ಚುಗೆ
ಹಿರಿಯ ಅಧಿಕಾರಿಗಳೊಂದಿಗೆ ಮೋದಿ ಸಂವಾದ:ನಿರ್ಮಾಣ ಸ್ಥಳಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ ಮೋದಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಜನವರಿಯಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಹೊಸ ಸಂಸತ್ ಕಟ್ಟಡವನ್ನು ಪೂರ್ಣಗೊಳಿಸಲು ಕೆಲವು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.