ನವದೆಹಲಿ:ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿರುದ್ಧ ಪ್ರತಿಪಕ್ಷಗಳು ತೀವ್ರ ನಡೆಸಿದ ತೀವ್ರ ಗದ್ದಲದಿಂದ ಉಭಯ ಸದನಗಳನ್ನು ಮುಂದೂಡಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡ ಬಳಿಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ರಾಷ್ಟ್ರದ ವೀರ ಸೈನಿಕರಿಗೆ ದೇಶವು ಋಣಿಯಾಗಿದೆ ಎಂದು ಸ್ಮರಿಸಲಾಯಿತು.
ಶ್ರದ್ಧಾಂಜಲಿ ಅರ್ಪಿಸಿದ ತಕ್ಷಣ, ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದರು.
ಈ ವೇಳೆ ಸದನದ ಕಲಾಪ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರು. ಆದರೆ, ಇದಕ್ಕೆ ಕಿವಿಗೊಡದ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದ ಸ್ಪೀಕರ್ ಕಲಾಪವನ್ನು ಮ. 2 ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲೂ 2 ಬಾರಿ ಮುಂದಕ್ಕೆ:ರಾಜ್ಯಸಭೆಯಲ್ಲೂ ಇದೇ ವಿಚಾರವಾಗಿ ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು. ಸಭಾಪತಿ ವೆಂಕಯ್ಯ ನಾಯ್ಡು ಅವರು ಚರ್ಚೆಗೆ ಅವಕಾಶ ಮಾಡಿಕೊಡಿ ಎಂಬ ಕೋರಿಕೆಗೂ ಮಣಿಯದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಇದರಿಂದ ಸದನವನ್ನು 2 ಬಾರಿ ಮುಂದೂಡಲಾಯಿತು.