ನವದೆಹಲಿ:ಕೇರಳಕ್ಕೆ ಮುಂಗಾರು ಆಗಮನದಲ್ಲಿ ವಿಳಂಬವಾಗಿದೆ. ಈ ಮೊದಲು ಇಂದು (ಮೇ 27) ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಇದೀಗ ಕೆಲ ದಿನಗಳ ವಿಳಂಬವಾಗಿ ಜೂನ್ 1ರೊಳಗೆ ಕೇರಳ ರಾಜ್ಯದಾದ್ಯಂತ ಮುಂಗಾರು ಆರಂಭ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು ಮತ್ತು ಇಡೀ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಪಕ್ಕದ ಪ್ರದೇಶಗಳು ಹಾಗೂ ಕೊಮೊರಿನ್ನ ಕೆಲವೆಡೆ ನೈಋತ್ಯ ಮುಂಗಾರು ಮತ್ತಷ್ಟು ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಅದೇ ರೀತಿಯಾಗಿ ಈ ವಾರದಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭವಾಗಲು ಪೂರಕವಾದ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳದಲ್ಲಿ ಮುಂಗಾರು ಆರಂಭವಾಗುವುದು ದೇಶಾದ್ಯಂತ ಕೃಷಿಕ ವರ್ಗಕ್ಕೆ ಬಹು ನಿರೀಕ್ಷಿತ ವಿಷಯವಾಗಿದೆ. ಮುಂಗಾರು ದೇಶದ ಆರ್ಥಿಕತೆ ಮೇಲೂ ಪಾತ್ರ ವಹಿಸುತ್ತದೆ. ಇನ್ನು, ಈ ಹಿಂದೆಯೇ ಮುಂಗಾರು ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದ ಹವಾಮಾನ ಇಲಾಖೆ ಇದರಲ್ಲಿ 4 ದಿನಗಳ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದೂ ತಿಳಿಸಿತ್ತು. ಕೇರಳದಲ್ಲಿ ಗುರುತಿಸಿದ 14 ಕೇಂದ್ರಗಳಲ್ಲೂ ಮಳೆ ಮಾಹಿತಿ ದಾಖಲಾಗಿಲ್ಲ.
ಇತ್ತ, ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೇ 16ಕ್ಕೆ ಅಂಡಮಾನ್ ಅನ್ನು ಮುಂಗಾರು ತಲುಪಿತ್ತು. ಆದರೆ, ಆರು ದಿನಗಳ ವಿರಾಮದ ಬಳಿಕ ಈಗ ಶ್ರೀಲಂಕಾದಿಂದ ಕೇರಳದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಕೇರಳಕ್ಕೆ ಆಗಮಿಸುವುದು ಮಾತ್ರವೇ ಬಾಕಿ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಒಡಿಶಾದಲ್ಲಿ ಶಿಶು ಮರಣ ಪ್ರಮಾಣ 36/1000: ಇದು ದೇಶದಲ್ಲೇ ಅತ್ಯಂತ ಕಡಿಮೆ