ದುರ್ಗ್ (ಛತ್ತೀಸ್ಗಢ): ಇಲ್ಲಿನ ಚಾರೋಡ ಬಸ್ತಿಯಲ್ಲಿ ಮೂವರು ಸಾಧುಗಳನ್ನು ಮಕ್ಕಳ ಕಳ್ಳರು ಎಂದು ಸಾರ್ವಜನಿಕರು ಥಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮೂವರು ಸಾಧುಗಳು ಮಗುವನ್ನು ಕದಿಯಲು ಮುಂದಾಗಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಮೂವರು ಸಾಧುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಸಾಧುಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ.
ಸಾಧುಗಳ ಮೇಲೆ ಹಲ್ಲೆ ನಡೆಸಿದ ಸಾರ್ವಜನಿಕರು ಭಿಲಾಯಿಯ ಮೂರು ಪೊಲೀಸ್ ಠಾಣೆ ಪ್ರಭಾರಿ ಮನೀಶ್ ಶರ್ಮಾ ಪ್ರಕಾರ, ಬುಧವಾರ ಬೆಳಗ್ಗೆ 11-12 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಆದರೆ ಘಟನೆಯ ವಿಡಿಯೋ ಒಂದು ದಿನದ ನಂತರ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಚಾರೋಡಾ ಪ್ರದೇಶಕ್ಕೆ ಮೂವರು ಸಾಧುಗಳು ಬರುತ್ತಿದ್ದರು, ಅದೇ ಸಮಯದಲ್ಲಿ ಈ ಮೂವರು ಸಾಧುಗಳು ಮಗುವನ್ನು ಕದ್ದಿದ್ದಾರೆ ಎಂದು ಯಾರೋ ಗಲಾಟೆ ಮಾಡಲು ಪ್ರಾರಂಭಿಸಿದರು. ಇದಾದ ನಂತರ ಸ್ಥಳೀಯ ಜನರು ಸಾಧುಗಳನ್ನು ತಡೆದು ವಿಚಾರಣೆ ನಡೆಸಿದರು. ಸ್ವಲ್ಪ ಸಮಯದ ನಂತರ ಅಲ್ಲಿ ಹೆಚ್ಚಿನ ಜನರು ಜಮಾಯಿಸಿ, ಸಾಧುಗಳನ್ನು ಹೊಡೆಯಲು ಪ್ರಾರಂಭಿಸಿದರು. ಓರ್ವ ಸಾಧುವಿನ ತಲೆ ಒಡೆದು ಹೋಗಿದೆ.
ಮೂಲಗಳ ಪ್ರಕಾರ, ಕೆಲವರು ಮದ್ಯ ಸೇವಿಸಿ ದಸರಾ ಪಾರ್ಟಿ ಮಾಡುತ್ತಿದ್ದರು. ಸಾಧುಗಳು ಅದೇ ದಾರಿಯಲ್ಲಿ ಸಾಗಿದ್ದರು. ಈ ವೇಳೆ ಒಬ್ಬಾತ ಮಕ್ಕಳ ಕಳ್ಳನೆಂದು ಹಲ್ಲೆ ನಡೆಸಿದ್ದಾನೆ. ನಂತರ ಈ ಮದ್ಯವ್ಯಸನಿಗಳು ಸಾಧುಗಳನ್ನು ಹೊಡೆಯಲು ಪ್ರಾರಂಭಿಸಿದರು.
ಇದನ್ನೂ ಓದಿ:ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಥಳಿತ
ಸಾಧುಗಳು ಎಲ್ಲಿಂದ ಬಂದಿದ್ದಾರೆ: ಪೊಲೀಸರಿಂದ ಬಂದ ಮಾಹಿತಿ ಪ್ರಕಾರ ಸಾಧುಗಳು ರಾಜಸ್ಥಾನದ ಅಲ್ವಾರ್ ನಿವಾಸಿಗಳಾಗಿದ್ದಾರೆ. ಅವರ ಹೆಸರು ರಾಜಬೀರ್ ಸಿಂಗ್, ಅಮನ್ ಸಿಂಗ್ ಮತ್ತು ಶ್ಯಾಮ್ ಸಿಂಗ್. ಈ ಸಾಧುಗಳು ಚರೋಡಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಪಡಿತರ, ಬಟ್ಟೆ ಕೇಳುವ ಮೂಲಕ ಜೀವನ ಸಾಗಿಸುತ್ತಿದ್ದರು.
ಇನ್ನೂ ಆರಂಭಿಕ ತನಿಖೆಯಲ್ಲಿ, ಈ ಸಾಧುಗಳಿಂದ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿಲ್ಲ. ಇಷ್ಟು ದಿನ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಾಧುಗಳ ಮೇಲೆ ಮಕ್ಕಳ ಕಳ್ಳತನದ ಆರೋಪ ಹೊರಿಸಿ ಥಳಿಸಿರುವುದು ಏಕೆ ಎಂಬ ಸಂಗತಿ ತಿಳಿಯುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಇದರಲ್ಲಿ 4 ಮಹಿಳೆಯರು ಮತ್ತು ಒಬ್ಬ ಪುರುಷ ಭಾಗಿಯಾಗಿದ್ದಾರೆ.