ಬಾಗ್‌ಪತ್ (ಉತ್ತರ ಪ್ರದೇಶ): ಮಂಗಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಬಾಲಕಿಯೊಬ್ಬರು ಮನೆಯ ಛಾವಣಿಯಿಂದ ಕೆಳಗೆ ಬಿದ್ದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ನಡೆದಿದೆ. 13 ವರ್ಷದ ರಿಯಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಛಪ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿನೌಲಿ ಗ್ರಾಮದ ನಿವಾಸಿಯಾಗಿದ್ದ ಬಾಲಕಿ ರಿಯಾ, ಸರೂರ್‌ಪುರ ಕಲಾನ್ ಗ್ರಾಮದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಳು. ಭಾನುವಾರ ಯಾವುದೋ ಕೆಲಸ ನಿಮಿತ್ತ ಛಾವಣಿ ಮೇಲೆ ಹೋಗಿದ್ದಳು. ಇದೇ ವೇಳೆ ಮಂಗಗಳು ಆಕೆಯನ್ನು ಸುತ್ತುವರಿದು ದಾಳಿ ಮಾಡಿವೆ. ಇದರಿಂದ ಗಾಯಗೊಂಡ ಬಾಲಕಿ ಗಾಬರಿಯಿಂದ ಮಾಳಿಗೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ನಂತರ ಸಂಬಂಧಿಕರು ಬಂದು ನೋಡಿದಾಗ ರಿಯಾ ಶವ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಜೊತೆಗೆ ಕೋತಿಗಳ ಹಿಂಡು ಛಾವಣಿಯ ಮೇಲೆ ಕುಳಿತಿದ್ದವು ಎಂದು ಮೃತ ಬಾಲಕಿಯ ಮಾವ ಶೇಖರ್ ತಿಳಿಸಿದ್ದಾರೆ. ಮತ್ತೊಂದೆಡೆ, ಈ ಘಟನೆಯಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ, ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚುತ್ತಿರುವ ಬಗ್ಗೆಯೂ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಗ್ರಾಮದಲ್ಲಿ ಇತ್ತೀಚೆಗೆ ಕೋತಿಗಳ ಹಾವಳಿ ಅಧಿಕವಾಗಿದೆ. ಮಂಗಗಳ ದಾಳಿಯಿಂದಾಗಿ ಪ್ರತಿನಿತ್ಯ ಇಂತಹ ಅಹಿತರ ಘಟನೆಗಳು ನಡೆಯುತ್ತಿವೆ. ಇದುವರೆಗೆ ಹಲವು ಮಹಿಳೆಯರು ಕೂಡ ಗಾಯಗೊಂಡಿದ್ದಾರೆ. ಕೋತಿಗಳ ಬಗ್ಗೆ ಅಧಿಕಾರಿಗಳಿಗೆ ಪ್ರತಿ ದಿನವೂ ದೂರು ನೀಡಲಾಗುತ್ತಿದೆ. ಆದರೂ, ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥ ಸುಭಾಷ್ ತಿಳಿಸಿದ್ದಾರೆ.