ಉಲಾನ್‌ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ದೇಶದ ಅಧ್ಯಕ್ಷರು ಬುಧವಾರ ಸುಂದರವಾದ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾರತದ ರಕ್ಷಣಾ ಸಚಿವರೊಬ್ಬರು ಮಂಗೋಲಿಯಾಗೆ ಭೇಟಿ ನೀಡಿದ್ದು ಇದೇ ಪ್ರಥಮ. ಏಳು ವರ್ಷಗಳ ಹಿಂದೆ ಮಂಗೋಲಿಯಾಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ರೀತಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಮಂಗೋಲಿಯಾದ ನಮ್ಮ ವಿಶೇಷ ಗೆಳೆಯರಿಂದ ಇದೊಂದು ವಿಶೇಷ ಉಡುಗೊರೆ. ಈ ಅದ್ಭುತ ಸೌಂದರ್ಯದ ಕುದುರೆಗೆ ತೇಜಸ್ ಎಂದು ಹೆಸರಿಟ್ಟಿರುವೆ. ಅಧ್ಯಕ್ಷ ಖುರೆಸ್ಲುಖ್ ಅವರಿಗೆ ಧನ್ಯವಾದಗಳು. ಥ್ಯಾಂಕ್ ಯೂ ಮಂಗೋಲಿಯಾ ಎಂದು ಸಚಿವ ರಾಜನಾಥ್ ಸಿಂಗ್ ಕುದುರೆಯ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ಮಂಗಳವಾರದಂದು ಸಚಿವ ರಾಜನಾಥ್ ಸಿಂಗ್ ಮಂಗೋಲಿಯಾ ಅಧ್ಯಕ್ಷ ಉಖ್ನಾಗಿನ್ ಖುರೆಸ್ಲುಖ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧವರ್ಧನೆಯ ಬಗ್ಗೆ ಮಾತುಕತೆ ನಡೆಸಿದರು.
ಉಲಾನ್ಬಾತರ್ನಲ್ಲಿ ಮಂಗೋಲಿಯಾ ಅಧ್ಯಕ್ಷ ಖುರೆಸ್ಲುಖ್ ಅವರೊಂದಿಗಿನ ಭೇಟಿ ಅದ್ಭುತವಾಗಿತ್ತು. ಅವರು 2018 ರಲ್ಲಿ ಪ್ರಧಾನಿಯಾಗಿದ್ದಾಗ ಭೇಟಿಯಾದ ಕ್ಷಣಗಳನ್ನು ಮೆಲುಕು ಹಾಕಿದೆವು. ಎರಡೂ ದೇಶಗಳ ಮಧ್ಯದ ಬಹುಮುಖ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಕಟಿಬದ್ಧವಾಗಿದ್ದೇವೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗೋಲಿಯಾಗೆ ಭೇಟಿ ನೀಡಿದಾಗ ಅವರಿಗೆ ವಿಶಿಷ್ಟವಾದ ಬ್ರೌನ್ ರೇಸ್ ಹಾರ್ಸ್ ಒಂದನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆಗ ಮಂಗೋಲಿಯಾ ಅಧ್ಯಕ್ಷರಾಗಿದ್ದ ಚಿಮೆಡ್ ಸೈಖಾನಬಿಲೆಗ್ ಕುದುರೆ ಉಡುಗೊರೆ ನೀಡಿದ್ದರು.
ರಕ್ಷಣಾ ಸಚಿವ ಸಿಂಗ್ ಸೋಮವಾರದಿಂದ ಐದು ದಿನಗಳ ಕಾಲ ಮಂಗೋಲಿಯಾ ಮತ್ತು ಜಪಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ.