ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ ಪಿಎಂಎಲ್ಎ ವಿಶೇಷ ನ್ಯಾಯಾಲಯದಿಂದ ಜಾಮೀನು ವಿಸ್ತರಣೆಯಾಗಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಈ ಆದೇಶ ಪ್ರಕಟಿಸಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿಕೆಶಿ ಹಾಗೂ ಇತರೆ ನಾಲ್ವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಸಾಕ್ಷ್ಯಗಳನ್ನು ತಿರುಚುವಂತಿಲ್ಲ, ದೇಶದಿಂದ ಹೊರಗೆ ಹೋಗದಂತೆಯೂ ಹಾಗೂ 1 ಲಕ್ಷ ರೂ. ಶ್ಯೂರಿಟಿ ಮೇಲೆ ಈ ಹಿಂದೆ ಡಿಕೆಶಿಗೆ ಜಾಮೀನು ನೀಡಲಾಗಿತ್ತು. ಇದೀಗ ಅದನ್ನು ವಿಸ್ತರಿಸಲಾಗಿದೆ. ಪ್ರಕರಣದಲ್ಲಿ ಇತರ ಆರೋಪಿಗಳಾದ ಆಂಜನೇಯ ಹನುಮಂತಯ್ಯ, ಸಚಿನ್ ನಾರಾಯಣ, ಸುನಿಲ್ ಶರ್ಮ ಮತ್ತು ರಾಜೇಂದ್ರ ಅವರಿಗೂ ಷರತ್ತುಬದ್ಧ ಜಾಮೀನು ದೊರೆತಿದೆ.
ರಾಜ್ಯ ಸರ್ಕಾರವು 2019ರ ಸೆಪ್ಟೆಂಬರ್ನಲ್ಲಿ ಅಕ್ರಮ ಆಸ್ತಿ ಹೊಂದಿದ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದ್ದು, ಆ ಪ್ರಕಾರ 2020ರ ಅಕ್ಟೋಬರ್ 3 ರಂದು ಕೇಂದ್ರೀಯ ತನಿಖಾ ದಳವು ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿದೆ. ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಕುರಿತು ಡಿಕೆಶಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.