ರಾಂಚಿ (ಜಾರ್ಖಂಡ್):ನರೇಗಾ ಯೋಜನೆಯ ಅವ್ಯವಹಾರ ಮತ್ತು ಅಕ್ರಮ ಗಣಿ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರ್ಖಂಡ್ನ ಗಣಿ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ವು 19.31 ಕೋಟಿ ರೂ. ಮೌಲ್ಯದ ನಗದು ಹಣ ವಶಪಡಿಸಿಕೊಂಡಿದೆ. ಅಲ್ಲದೇ, ಈ ಪ್ರಕರಣದಲ್ಲಿ ಸುಮನ್ ಕುಮಾರ್ನನ್ನು ಬಂಧಿಸಲಾಗಿದೆ. ಇವರ ಸಹೋದರ ಪವನ್ನನ್ನು ಇಡಿ ವಿಚಾರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಪೂಜಾ ಸಿಂಘಾಲ್ ಅವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.
2008 ರಿಂದ 11ರ ಅವಧಿಯಲ್ಲಿ ಜಾರ್ಖಂಡ್ನ ಖುಂತಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 18 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಹೀಗಾಗಿ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ನಿವಾಸ ಸೇರಿ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಒಟ್ಟಾರೆ 18 ಕಡೆಗಳಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲಿಸಲಾಗಿತ್ತು.