ಬೆತಿಯಾ (ಬಿಹಾರ ) : ಅಪ್ರಾಪ್ತ ಬಾಲಕಿಗೆ ಸಂಬಂಧಿ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯಾಗಿರುವ ಘಟನೆ ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಾಹ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ವಿಷಯವನ್ನು ಮುಚ್ಚಿಡಲು ಸಂತ್ರಸ್ತೆಯ ಮನೆಯವರ ಮೇಲೆ ಒತ್ತಡ ಹೇರಿ ಪಂಚಾಯಿತಿ ನಡೆಸಿರುವುದಾಗಿ ತಿಳಿದುಬಂದಿದೆ. ಅಚ್ಚರಿಯ ಸಂಗತಿ ಎಂದರೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಗೆ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ಪಂಚಾಯಿತಿ ಆದೇಶ ಹೊರಡಿಸಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯ ಭೈರೋಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವೃದ್ಧ ತನ್ನ ಮನೆಯಲ್ಲಿ ಯಾರೂ ಇಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಹಾರ ತಯಾರಿಸಿಕೊಡಲು ಕರೆಸಿಕೊಂಡಿದ್ದ. ಬಾಲಕಿ ತಂದೆಯ ಒಪ್ಪಿಗೆಯಂತೆ ಆಹಾರ ಮಾಡಿಕೊಡಲು ಸಂಬಂಧಿ ವೃಧ್ದನ ಮನೆಗೆ ಹೋಗಿದ್ದಳು. ಈ ಸಂದರ್ಭ ಅತ್ಯಾಚಾರ ಎಸಗಿರುವುದಾಗಿ ತಿಳಿದುಬಂದಿದೆ. ನಂತರ ಬಾಲಕಿ ಗರ್ಭಿಣಿಯಾಗಿದ್ದು, ಕೆಲವು ದಿನಗಳ ನಂತರ ಬಾಲಕಿಯ ಮನೆಯವರು ಗರ್ಭಪಾತ ಮಾಡಿಸಿದ್ದರು. ಈ ವಿಷಯ ಜನರಿಗೆ ತಿಳಿದಿಲ್ಲ ಎಂದು ಬಾಲಕಿಯ ಮನೆಯವರು ಮೌನವಾಗಿದ್ದರು.