ಕರ್ನಾಟಕ

karnataka

ETV Bharat / bharat

'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಿದ್ದೇವೆ'; ಪ್ರತಿಪಕ್ಷ ನಾಯಕರ ಹೇಳಿಕೆ - ಪ್ರತಿಪಕ್ಷಗಳ ಸಂಸದರು ಹಾಗೂ ಐಫೋನ್

ಸರ್ಕಾರಿ ಪ್ರಾಯೋಜಿತದ ದಾಳಿಕೋರರು ನಮ್ಮ ಫೋನ್​ಗಳು ಹಾಗೂ ಇಮೇಲ್ ಹ್ಯಾಕ್​ ಮಾಡಲು ಯತ್ನಿಸುತ್ತಿದ್ದಾರೆ. ಈ ಕುರಿತು ಎಚ್ಚರಿಕೆಯ ಸಂದೇಶಗಳನ್ನು ಸ್ವೀಕರಿಸಲಾಗಿದೆ ಎಂದು ಟಿಸಿಎಂ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.

Moitra, Tharoor, others say they've got Apple alert about state sponsored attack on their iPhones
'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಲಾಗಿದೆ': ಮಹುವಾ ಮೊಯಿತ್ರಾ, ತರೂರ್ ಸೇರಿ ಪ್ರತಿಪಕ್ಷಗಳ ನಾಯಕರ ಹೇಳಿಕೆ

By ETV Bharat Karnataka Team

Published : Oct 31, 2023, 1:24 PM IST

ನವದೆಹಲಿ:ಸರ್ಕಾರಿ ಪ್ರಾಯೋಜಿತದ ದಾಳಿಕೋರರು ತಮ್ಮ ಫೋನ್​ಗಳ​ ಹ್ಯಾಕ್​ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಸಂಸದರು ಹಾಗೂ ನಾಯಕರು ಇಂದು (ಮಂಗಳವಾರ) ಗಂಭೀರ ಆರೋಪ ಮಾಡಿದ್ದಾರೆ. ''ರಾಜ್ಯ ಪ್ರಾಯೋಜಿತ ದಾಳಿಕೋರರು ತಮ್ಮ ಫೋನ್​ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ'' ಎಂಬ ಎಚ್ಚರಿಕೆ ಸಂದೇಶವನ್ನು ತಮ್ಮ ಫೋನ್ ತಯಾರಕರಿಂದ ಸ್ವೀಕರಿಸಿರುವುದಾಗಿ ಕಾಂಗ್ರೆಸ್​, ಟಿಎಂಸಿ, ಆಮ್​ ಆದ್ಮಿ ಪಕ್ಷ, ಉದ್ಧವ್​ ಠಾಕ್ರೆ ಬಣದ ಶಿವಸೇನೆ ನಾಯಕರು ದೂರಿದ್ದಾರೆ.

ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ, ಉದ್ಧವ್​ ಠಾಕ್ರೆ ಬಣದ ಶಿವಸೇನೆಯ ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ನಾಯಕರಾದ ಸಂಸದ ಶಶಿ ತರೂರ್ ಮತ್ತು ಪವನ್ ಖೇರಾ, ಆಮ್​ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯ ರಾಘವ್​ ಚಡ್ಡಾ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಫೋನ್‌ಗೆ ಆ್ಯಪಲ್​ ಸಂಸ್ಥೆಯಿಂದ ಸ್ವೀಕರಿಸಿದ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್​ ಮಾಡಿದ್ದಾರೆ.

''ಸರ್ಕಾರವು ನನ್ನ ಫೋನ್​ ಮತ್ತು ಇಮೇಲ್​ ಅನ್ನು ಹ್ಯಾಕ್​ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ಎಚ್ಚರಿಕೆ ನೀಡುವ ಸಂದೇಶ ಮತ್ತು ಇಮೇಲ್​ ಸಂದೇಶವನ್ನು ಆ್ಯಪಲ್​ನಿಂದ ಸ್ವೀಕರಿಸಲಾಗಿದೆ'' ಎಂದು ಟಿಸಿಎಂ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಬರೆದುಕೊಂಡು ಕೇಂದ್ರ ಗೃಹ ಸಚಿವಾಲಯಕ್ಕೆ ಟ್ಯಾಗ್​ ಮಾಡಿದ್ದಾರೆ. ಮುಂದುವರೆದು, ''ಅದಾನಿ ಮತ್ತು ಪಿಎಂಒ ಬುಲ್ಲೀಸ್​ (ಹೆದರಿಸುವವರು) - ನಿಮ್ಮ ಭಯವು ನನಗೆ ನಿಮ್ಮ ಮೇಲೆ ಕರುಣೆಯನ್ನುಂಟು ಮಾಡುತ್ತದೆ'' ಎಂದು ಮೊಯಿತ್ರಾ ಹೇಳಿದ್ದಾರೆ.

''ನಾನು ವೆರಿಫೈಟ್​ ಆ್ಯಪಲ್​ ಐಡಿ ಹಾಗೂ ಇ-ಮೇಲ್​ನಿಂದ ಸಂದೇಶ ಸ್ವೀಕರಿಸಿದ್ದೇನೆ. ಇದರ ಸತ್ಯಾಸತ್ಯತೆ ದೃಢಪಡಿಸಲಾಗಿದೆ. ನನ್ನಂತಹ ತೆರಿಗೆದಾರರ ವೆಚ್ಚದಲ್ಲಿ ನಿರುದ್ಯೋಗಿ ಅಧಿಕಾರಿಗಳನ್ನು ಕಾರ್ಯ ನಿರತವಾಗಿರಿಸಲು ಸಂತೋಷವಾಗಿದೆ!. ಇದಕ್ಕಿಂತ ಮಾಡಲು ಹೆಚ್ಚು ಮುಖ್ಯವಾದೇನೂ ಇಲ್ಲವೇ?'' ಎಂದು ಕಾಂಗ್ರೆಸ್​ ಸಂಸದ ಶಶಿ ತರೂರ್​ 'ಎಕ್ಸ್​'ನಲ್ಲಿ ಫೋಸ್ಟ್​ ಮಾಡಿದ್ದಾರೆ.

ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಸಹ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ''ಕಳೆದ ರಾತ್ರಿ ನಾನು ಎಚ್ಚರಿಕೆ ಸ್ವೀಕರಿಸಿದ್ದೇನೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯವಾಗಿದೆ. ನಾನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದು ತೋರಿಸುತ್ತದೆ. ಈ ದಾಳಿಗಳು 'ರಾಜ್ಯ ಪ್ರಾಯೋಜಿತ' ಎಂದು ಎಚ್ಚರಿಕೆ ಸ್ಪಷ್ಟವಾಗಿ ಹೇಳುತ್ತದೆ. ವಿರೋಧ ಪಕ್ಷದ ನಾಯಕರಿಗೆ ಮಾತ್ರ ಇಂತಹ ಸಂದೇಶಗಳು ಏಕೆ ಬರುತ್ತಿವೆ?, ನಮ್ಮ ಮೇಲೆ ದೊಡ್ಡ ಮಟ್ಟದ ಕಣ್ಗಾವಲು ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು'' ಎಂದು ಒತ್ತಾಯಿಸಿದ್ದಾರೆ.

ಈ ಸಂದೇಶದಲ್ಲಿ ಏನಿದೆ?:ತಮ್ಮ ಮೊಬೈಲ್​ಗೆ ಸಂಸದರು ಸ್ವೀಕರಿಸಿರುವ ಎಚ್ಚರಿಕೆಯ ಸಂದೇಶ ಸ್ಕ್ರೀನ್‌ಶಾಟ್‌ಗಳನ್ನು ಪ್ರಕಾರ, ''ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್​ಅನ್ನು ಗುರಿಯಾಗಿಸಬಹುದು'' ಎಂದು ಅಲರ್ಟ್​ ನೀಡಲಾಗಿದೆ. ''ನಿಮ್ಮ ಆ್ಯಪಲ್​ ಐಡಿಯೊಂದಿಗೆ ಸಂಯೋಜಿತವಾಗಿರುವ ಐಫೋನ್​ಅನ್ನು ದೂರದಿಂದಲೇ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ನೀವು ಗುರಿಯಾಗಿದ್ದೀರಿ ಎಂದು ಆ್ಯಪಲ್​ ಭಾವಿಸುತ್ತದೆ. ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ ಕಾರಣದಿಂದ ಈ ದಾಳಿಕೋರರು ನಿಮ್ಮನ್ನು ವೈಯಕ್ತಿಕವಾಗಿ ಗುರಿಪಡಿಸುತ್ತಿರಬಹುದು. ನಿಮ್ಮ ಸಾಧನವು ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ರಾಜಿ ಮಾಡಿಕೊಂಡರೆ, ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು ಅಥವಾ ಕ್ಯಾಮರಾ ಮತ್ತು ಮೈಕ್ರೊಫೋನ್​ಅನ್ನು ದೂರದಿಂದಲೇ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ತಪ್ಪು ಎಚ್ಚರಿಕೆ ಆಗಿರುವ ಸಾಧ್ಯತೆಯಿದ್ದರೂ, ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ'' ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:'' ಅದು ಅಧಿಕೃತ ಲೆಟರ್‌ಹೆಡ್‌ ಅಲ್ಲ'': ಉದ್ಯಮಿ ಅಫಿಡವಿಟ್​ಗೆ ಮಹುವಾ ಮೊಯಿತ್ರಾ ಪ್ರತಿಕ್ರಿಯೆ

ABOUT THE AUTHOR

...view details