ಅರಾರಿಯ/ಬಿಹಾರ್:ಮೊಹಮ್ಮದ್ ಸದ್ದಾಂ ಮತ್ತು ಆಯಿಷಾ ಎಂಬುವರು ಇನ್‌ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಿತರಾದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಸ್ನೇಹ ಸಲುಗೆಯಾಗಿ, ಸಲುಗೆ ಪ್ರೀತಿಯಾಗಿ ಅವರ ಮದುವೆಗೆ ಕಾರಣವಾಯಿತು. ಇದೆಲ್ಲವೂ ಆಗಿದ್ದು ಕೇವಲ ಐದು ತಿಂಗಳ ಅವಧಿಯಲ್ಲಿ.
ಉತ್ತರ ಪ್ರದೇಶದ ಮೀರತ್ ನಿವಾಸಿ ಆಯೆಷಾ ಅನುಕೂಲಸ್ಥರ ಮನೆ ಹುಡುಗಿ. ಆದರೆ ಆಕೆ ಪ್ರೀತಿಸಿದ ಹುಡುಗ ಅಷ್ಟೇನೂ ಅನುಕೂಲವಿಲ್ಲದ ಸಾಮಾನ್ಯ ಹಳ್ಳಿಯಲ್ಲಿ ವಾಸವಿದ್ದ ಹುಡುಗ. ಆದರೆ, ಅಂತಸ್ತಿನ ನೆಪವೊಡ್ಡಿ ಪ್ರೀತಿ ಕಳೆದುಕೊಳ್ಳಲು ಇಷ್ಟವಿಲ್ಲದ ಕಾರಣ ಆಯಿಷಾ, ಮನೆ ಬಿಟ್ಟು ಏಕಾಂಗಿಯಾಗಿ ಹೊರಬಂದಳು. ತನ್ನ ಪ್ರೀತಿಯನ್ನು ಹುಡುಕಿಕೊಂಡು ದೆಹಲಿ ಮೂಲಕ ಬಿಹಾರದ ಹಳ್ಳಿಯೊಂದಕ್ಕೆ ಬಂದರು. ಬಿಹಾರದ ಅರೇರಿಯಾದ ದೂರದ ಹಳ್ಳಿಯಲ್ಲಿ ವಾಸವಿದ್ದ ಪ್ರಿಯಕರ ಸದ್ದಾಂ ಅವರನ್ನು ಭೇಟಿಯಾದಳು. ವಿಷಯ ತಿಳಿದ ಆಯಿಷಾಳ ಕುಟುಂಬವು ಸದ್ದಾಂ ಮದುವೆಯಾಗುವುದನ್ನು ತಡೆಯಲು ಪ್ರಯತ್ನಿಸಿದರೂ, ಅವಳು ತನ್ನ ಪ್ರೀತಿಯನ್ನು ಮಾತ್ರ ಬಿಟ್ಟುಕೊಡಲಿಲ್ಲ.
ಘಟನೆಯ ಬಗ್ಗೆ ತಿಳಿದ ಸ್ಥಳೀಯ ಶಾಸಕ ವಿಜಯ್ ಕುಮಾರ್ ಮಂಡಲ್, ಹುಡುಗ ಮತ್ತು ಹುಡುಗಿ ಇಬ್ಬರನ್ನೂ ಕರೆಸಿ ಮಾತನಾಡಿದರು. ಇಬ್ಬರು ವಯಸ್ಕರಾದ ಕಾರಣ ಆಯಿಷಾ ತನ್ನ ಸ್ವಂತ ಆಯ್ಕೆಯಿಂದ ಸದ್ದಾಂನನ್ನು ಮದುವೆಯಾಗಲು ಬಯಸಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ, ಇಸ್ಲಾಮ್ ಧರ್ಮದ ಪ್ರಕಾರ ಅವರ ನಿವಾಸದಲ್ಲಿ ಇಬ್ಬರಿಗೂ ವಿವಾಹ ಮಾಡಿದರು.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಆಯಿಷಾ, ಆಸ್ತಿ- ಅಂತಸ್ತಿನ ಕಾರಣಕ್ಕೆ ನಮ್ಮ ಕುಟುಂಬದವರು ನಮ್ಮ ಮದುವೆಗೆ ಎಂದಿಗೂ ಒಪ್ಪುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಅದಕ್ಕಾಗಿ ಅವರಿಗೆ ಹೇಳದೇ ಹೀಗೆ ಮಾಡಿದೆ. ನನ್ನ ಪ್ರೀತಿಯನ್ನು ಪಡೆಯಲು ನಾನು ಈ ಹೆಜ್ಜೆ ಇಡಬೇಕಾಗಿತ್ತು. ನಾನು ಇಲ್ಲಿ ಸಂತೋಷವಾಗಿದ್ದೇನೆ ಮತ್ತು ಯಾವುದೇ ಸಮಸ್ಯೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ತನ್ನ ಪ್ರೀತಿಯೊಂದಿಗೆ ತನ್ನ ಜೀವನ ಕಳೆಯಲು, ಆಯೆಷಾ ಮೀರತ್‌ನಲ್ಲಿರುವ ತನ್ನ ಶ್ರೀಮಂತಿಕೆ ತೊರೆದು ಬಂದು ಇದೀಗ ಪ್ರೀತಿಸಿದವನನ್ನೇ ಮದುವೆಯಾಗಿ ಈಗ ಅರಾರಿಯಾದ ಐಶ್‌ಬಾಗ್ ಗ್ರಾಮದಲ್ಲಿ ಸದ್ದಾಂ ಮತ್ತು ಅವನ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಿದ್ದಾಳೆ.