ಭೋಪಾಲ್ (ಮಧ್ಯಪ್ರದೇಶ):ಕೇಸರಿ ಪಡೆಯ ಭದ್ರಕೋಟೆಯಾಗಿರುವ ಮಧ್ಯಪ್ರದೇಶದ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಕೊನೆಗೂ ಮುಗಿದಿದೆ. ಉಜ್ಜಯಿನಿ ದಕ್ಷಿಣ ಕ್ಷೇತ್ರದ ಶಾಸಕ ಮೋಹನ್ ಯಾದವ್ ಅವರನ್ನು ನೂತನ ಸಿಎಂ ಆಗಿ ಘೋಷಿಸಲಾಗಿದೆ. ಈ ಮೂಲಕ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಇದರ ಜೊತೆಗೆ ಜಗದೀಶ್ ದೇವಾಡ ಮತ್ತು ರಾಜೇಂದ್ರ ಶುಕ್ಲಾ ಅವರು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ವಿಧಾನಸಭೆಯ ಸ್ಪೀಕರ್ ಆಗಿ ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಎಂ ಆಯ್ಕೆಯ ಮಹತ್ವದ ನಿರ್ಧಾರ ಕೈಗೊಳ್ಳಲು ಬಿಜೆಪಿ ಹೈಕಮಾಂಡ್ ವೀಕ್ಷಕರ ತಂಡವನ್ನು ಇಂದು ಭೋಪಾಲ್‌ಗೆ ಕಳುಹಿಸಿತ್ತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಆಶಾ ಲಾಕ್ರಾ ಮತ್ತು ಕೆ ಲಕ್ಷ್ಮಣ್ ಅವರು ಬೆಳಗ್ಗೆಯಿಂದ ಶಾಸಕರ ಸಭೆ ನಡೆಸಿದರು. ಸುದೀರ್ಘ ಚರ್ಚೆ ಬಳಿಕ ಮೋಹನ್ ಯಾದವ್ ಅವರ ಆಯ್ಕೆಗೆ ನೂತನ ಶಾಸಕರು ಸರ್ವಸಮ್ಮತಿ ಸೂಚಿಸಿದರು.
ಹೀಗಿತ್ತು ಸಿಎಂ ಆಯ್ಕೆ ಪ್ರಕ್ರಿಯೆ:ಡಿಸೆಂಬರ್ 3 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 7 ದಿನಗಳ ನಂತರ, ಸೋಮವಾರ ಸಂಜೆ ಅಂತಿಮವಾಗಿ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಾಯಿತು. ಆಯ್ಕೆ ಪ್ರಕ್ರಿಯೆಗಾಗಿ ಇಂದು ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಯಿತು. ಇದಕ್ಕೂ ಮೊದಲು ಎಲ್ಲ ನೂತನ ಶಾಸಕರ ಫೋಟೋಶೂಟ್ ನಡೆಸಲಾಯಿತು.
ಕೇಂದ್ರ ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯ ಪಡೆದರು. ಸಭೆಯಲ್ಲಿ ಮೋಹನ್ ಯಾದವ್ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕ ಕಾರಣ ಅವರನ್ನೇ ಮುಂದಿನ ಸಿಎಂ ಎಂದು ಘೋಷಿಸಲಾಯಿತು. ಇದರ ನಂತರ, ವೀಕ್ಷಕರು ಈ ಬಗ್ಗೆ ದೆಹಲಿಯ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದರು.
ಪ್ರಹ್ಲಾದ್ ಪಟೇಲ್ ಪೈಪೋಟಿ:ಛತ್ತೀಸ್‌ಗಢದಲ್ಲಿ ಆದಿವಾಸಿ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ. ಇಂಥದ್ದೇ ಯೋಜನೆಯನ್ನು ಮಧ್ಯಪ್ರದೇಶದಲ್ಲೂ ನಡೆಸಲಿದೆ ಎಂದು ಎಣಿಸಲಾಗಿತ್ತು. ಹಿಂದುಳಿದ ವರ್ಗದ ನಾಯಕ ಪ್ರಹ್ಲಾದ್ ಪಟೇಲ್ ಅವರಿಗೆ ಸಿಎಂ ಸ್ಥಾನ ಸಿಗಲಿದೆ ಎಂದು ಊಹಾಪೋಹಗಳು ಹರಿದಾಡಿದ್ದವು. ಪ್ರಹ್ಲಾದ್ ಪಟೇಲ್ ಒಬಿಸಿ ವರ್ಗದವರಾಗಿದ್ದಲ್ಲದೇ, ರಾಜಕೀಯದಲ್ಲಿಯೂ ಉತ್ತಮ ಅನುಭವ ಹೊಂದಿದ್ದಾರೆ. ಉತ್ತಮ ವಾಗ್ಮಿಯೂ ಹೌದು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿತ್ತು.
ಯಾರು ಈ ಮೋಹನ್ ಯಾದವ್?:2013 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಮೋಹನ್ ಯಾದವ್ ಅವರು, 2018 ರಲ್ಲಿ ಮರು ಆಯ್ಕೆಯಾದರು. 2020 ರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೇತನ್ ಪ್ರೇಮನಾರಾಯಣ್ ಅವರ ವಿರುದ್ಧ 12,941 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಲ್ಲದೇ, ಈಗ ಏಕಾಏಕಿ ಸಿಎಂ ಸ್ಥಾನಕ್ಕೇರಿದ್ದಾರೆ.
ಹಿರಿಯ ನಾಯಕರಿಗಿಲ್ಲ ಮಣೆ:ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಅವರ ಹೆಸರುಗಳು ಕೂಡ ಸಿಎಂ ಸ್ಥಾನದ ರೇಸ್ನಲ್ಲಿದ್ದವು. ಆದರೆ, ಭವಿಷ್ಯದ ರಾಜಕಾರಣದ ದೃಷ್ಟಿಯಿಂದಾಗಿ ಮೋಹನ್ ಅವರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:370ನೇ ವಿಧಿ ರದ್ದು ಪ್ರಕರಣ: ಸುಪ್ರೀಂಕೋರ್ಟ್ ತೀರ್ಪಿಗೆ ನಾಯಕರ ಪ್ರತಿಕ್ರಿಯೆ ಹೀಗಿದೆ