ಪಾಟ್ನಾ(ಬಿಹಾರ):ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ, ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಶುಕ್ರವಾರ ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡುತ್ತಿದ್ದು ಭಾಗಲ್ಪುರ ಹಾಗೂ ಸುತ್ತಮುತ್ತ ಪೊಲೀಸ್ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಭಾಗವತ್ ಅವರಿಗೆಐಎಸ್ಐ ಮತ್ತು ಸಿಪಿಐ (ಮಾವೋವಾದಿ) ನಂತಹ ನಿಷೇಧಿತ ಸಂಘಟನೆಗಳಿಂದ ಬೆದರಿಕೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾಗಲ್ಪುರ್ ಜಿಲ್ಲೆ ಮತ್ತು ಪೊಲೀಸ್ ಆಡಳಿತವು ಪಾಟ್ನಾದಲ್ಲಿರುವ ಬಿಹಾರ ಪೊಲೀಸ್ ಪ್ರಧಾನ ಕಛೇರಿ ನೀಡಿದ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಮೋಹನ್ ಭಾಗವತ್ ಅವರ ಭಾಗಲ್ಪುರ ಭೇಟಿ ಹಿನ್ನೆಲೆಯಲ್ಲಿ ವಿಸ್ತೃತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆನಂದ್ ಕುಮಾರ್ ತಿಳಿಸಿದ್ದಾರೆ. ಪಾಟ್ನಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಅಧಿಕಾರಿಗಳು ಎಚ್ಚರಿಕೆಯ ಸಂದೇಶ ನೀಡಿದ ನಂತರ ನಾವು ಫೂಲ್ಪ್ರೂಫ್ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ನಗರದ ವಿವಿಧ ಭಾಗಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ ಎಂದು ಹೇಳಿದರು.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಧನಂಜಯ್ ಕುಮಾರ್ ಮಾಧ್ಯಮದ ಜೊತೆ ಮಾತನಾಡಿ, "ನಗರದ ಹಲವಾರು ವೇಂಟೇಜ್ ಪಾಯಿಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈಗಾಗಲೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವುಗಳ ಸಹಾಯದಿಂದ ಯಾವುದೇ ಸ್ಥಳಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ನಗರದ ವಿವಿಧ ಭಾಗಗಳಲ್ಲಿ ಸಿವಿಲ್ ಡ್ರೆಸ್‌ನಲ್ಲಿರುವ ಪೊಲೀಸರನ್ನೂ ಸಹ ನಿಯೋಜಿಸಲಾಗಿದೆ. ಇದಲ್ಲದೆ, ಮೋಹನ್ ಭಾಗವತ್ ಅವರು ಮಹಿರ್ಷಿ ಮೆಹಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದು, ಆಶ್ರಮದ ಸಮೀಪ ಇರುವ ಗಂಗಾ ನದಿ ಬಳಿಯೂ ಗಸ್ತು ತೀವ್ರಗೊಳಿಸಲಾಗಿದೆ" ಎಂದರು.