ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) :ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಜಗತ್ತಿನಲ್ಲಿ ಎಲ್ಲವನ್ನೂ ತಿಳಿದವರಲ್ಲಿ ಒಬ್ಬರು ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಎನ್ಆರ್ಐಗಳೊಂದಿಗೆ ನಡೆಸಿದ ಸಂವಾದ ಸಭೆಯಲ್ಲಿ ರಾಹುಲ್ ಮಾತನಾಡಿದರು. ತಾವು ದೇವರಿಗಿಂತಲೂ ಹೆಚ್ಚು ಎಂದು ಕೆಲವರು ತಿಳಿದುಕೊಂಡಿದ್ದಾರೆ. ಹಾಗಂತ ಅವರು ಬಲವಾಗಿ ನಂಬುತ್ತಾರೆ. ಅವರು ದೇವರೊಂದಿಗೂ ಕುಳಿತು ಸಂಭಾಷಣೆ ನಡೆಸಬಲ್ಲರು. ದೇವರಿಗೇ ಇವರು ವಿಷಯಗಳನ್ನು ತಿಳಿಸಬಲ್ಲರು. ಪ್ರಧಾನಿ ಮೋದಿ ಕೂಡ ಅಂಥ ವಿಚಿತ್ರ ಪ್ರಾಣಿಗಳಲ್ಲಿ ಒಬ್ಬರು ಎಂದು ರಾಹುಲ್ ಗಾಂಧಿ ಹೇಳಿದರು.
"ಹೌದು, ಸಂಶಯವೇ ಇಲ್ಲ. ಪ್ರಧಾನಿ ಮೋದಿ ಅಂಥವರಲ್ಲಿ ಒಬ್ಬರು. ಮೋದಿಯವರನ್ನು ನೀವು ದೇವರೊಂದಿಗೆ ಕೂಡಿಸಿದರೆ ಜಗತ್ತು ಹೇಗೆ ನಡೆಯುತ್ತಿದೆ ಎಂಬುದನ್ನು ಅವರು ದೇವರಿಗೇ ಹೇಳಬಲ್ಲರು. ಎಂಥೆಂಥ ಜನರನ್ನು ಸರಷ್ಟಿ ಮಾಡಿದೆನಲ್ಲ ಎಂದು ದೇವರಿಗೇ ಬೇಜಾರಾಗಬಹುದು. ಈ ಬಿಜೆಪಿಯವರು ವಿಜ್ಞಾನಿಗಳಿಗೆ ವಿಜ್ಞಾನ ಕಲಿಸಬಲ್ಲರು. ಇತಿಹಾಸಕಾರರಿಗೆ ಇತಿಹಾಸ ಹೇಳಬಲ್ಲರು. ಮಿಲಿಟರಿಗೆ ಯುದ್ಧ ಮಾಡುವುದನ್ನು ಮತ್ತು ವಾಯುಪಡೆಗೆ ಹೇಗೆ ವಿಮಾನ ಹಾರಿಸಬೇಕೆಂಬುದನ್ನು ಕಲಿಸಬಲ್ಲರು. ಆದರೆ ವಾಸ್ತವದಲ್ಲಿ ಅವರಿಗೆ ಏನೂ ಗೊತ್ತಿಲ್ಲ" ಎಂದು ರಾಹುಲ್ ಗಾಂಧಿ ತಿಳಿಸಿದರು.
ರಾಜಕೀಯವನ್ನು ಚಾಲನೆಯಲ್ಲಿಡುವ ಎಲ್ಲ ಮಾರ್ಗಗಳನ್ನು ನಿಯಂತ್ರಿಸಲಾಗಿದ್ದುದರಿಂದ ನಾನು ಭಾರತ್ ಜೋಡೊ ಯಾತ್ರೆ ಮಾಡುವುದು ಅನಿವಾರ್ಯವಾಯಿತು. ಇಡೀ ದೇಶವೇ ನನ್ನ ಜೊತೆಗೆ ನಡೆಯಿತು ಎಂದು ರಾಹುಲ್ ನುಡಿದರು. "ಕೆಲ ತಿಂಗಳುಗಳ ಹಿಂದೆ ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲು ಆರಂಭಿಸಿದೆವು. ಜನರನ್ನು ತಲುಪುವ ಸಹಜ ರಾಜಕೀಯದ ಮಾರ್ಗಗಳು ಕೆಲಸ ಮಾಡುತ್ತಿಲ್ಲ ಎಂಬುದು ನನಗೆ ಆಗ ಗೊತ್ತಾಯಿತು. ಅವೆಲ್ಲವನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ನಿಯಂತ್ರಿಸುತ್ತವೆ. ಜನರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಅವರನ್ನು ಬೆದರಿಸಲಾಗುತ್ತಿದೆ. ಒಟ್ಟಾರೆಯಾಗಿ ರಾಜಕೀಯವಾಗಿ ಮುನ್ನಡೆಯುವುದು ಕಷ್ಟವಾಗಿತ್ತು. ಅದಕ್ಕಾಗಿಯೇ ನಾವು ಭಾರತದ ದಕ್ಷಿಣ ತುದಿಯಿಂದ ಶ್ರೀನಗರದವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಿದೆವು" ಎಂದು ಹೇಳಿದ ರಾಹುಲ್ ಗಾಂಧಿ, ಕೇಂದ್ರದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಿತು ಎಂದು ಆರೋಪಿಸಿದರು.