ನವದೆಹಲಿ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಭಾರತದ ಸದ್ಯದ 'ರಾಜಕೀಯ ಅನಿವಾರ್ಯತೆ'ಯಿಂದಾಗಿ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಇಂಗ್ಲೆಂಡ್ನ ಪತ್ರಿಕೆಯೊಂದು ಭವಿಷ್ಯ ನುಡಿದಿದೆ.
ಇದರ ಜೊತೆಗೆ, ರಾಮಮಂದಿರ ಉದ್ಘಾಟನೆಯಂತಹ ಭಾವನಾತ್ಮಕ ವಿಚಾರ, ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು, ಅದರಲ್ಲೂ ಪ್ರಮುಖವಾಗಿ ಮೋದಿ ಜನಪ್ರಿಯತೆ ಬಿಜೆಪಿ ಗೆಲುವನ್ನು ಇನ್ನಷ್ಟು ಸಲೀಸು ಮಾಡಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಹಿಂದಿ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಕೇಸರಿ ಪಡೆ ತನ್ನ ಬಾವುಟ ಹಾರಿಸಿರುವುದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಶಕ್ತಿ ಮತ್ತು ಆವೇಗವನ್ನು ನೀಡಿದೆ. ಇದು ಪ್ರಧಾನಿ ಮೋದಿ ಹ್ಯಾಟ್ರಿಕ್ ಅಧಿಕಾರ ಹಿಡಿಯುವುದನ್ನು ಖಾತ್ರಿಪಡಿಸಿದೆ. ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ರಾಜಕೀಯ ವಿಶ್ಲೇಷಕರ ಪ್ರಕಾರ ಮೋದಿ ಪ್ರಧಾನಿಯಾಗುವುದು, ಬಿಜೆಪಿ ಗೆಲ್ಲುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಂಕಣದಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಭಾರತದಲ್ಲಿ ಬಿಜೆಪಿ ಹಿಡಿತ:2014 ರಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ಹಿಂದಿ ರಾಜ್ಯಗಳಾದ ಉತ್ತರ ಭಾರತದಲ್ಲಿ ಬಿಜೆಪಿಯ ಹಿಡಿತ ಸಾಧಿಸಿದೆ. ಈಗ ಅದು ಇನ್ನಷ್ಟು ಗಟ್ಟಿಯಾಗಿದೆ. ಮೋದಿ ಜನಪ್ರಿಯತೆ ಬಹುಸಂಖ್ಯಾತ ಹಿಂದೂಗಳ ಮೇಲೆ ಪ್ರಭಾವ ಬೀರಿದೆ. ಸ್ಥಳೀಯವಾಗಿ ಬಿಜೆಪಿಗೆ ವಿರೋಧ ಎದುರಿಸಿದರೂ, ರಾಷ್ಟ್ರೀಯವಾಗಿ ಅದು ಬಲಾಢ್ಯವಾಗಿ ಕಂಡುಬರುತ್ತಿದೆ. ಚುನಾವಣಾ ಪೂರ್ವದಲ್ಲಿಯೇ ಬಿಜೆಪಿ ನಡೆಸುತ್ತಿರುವ ಅಭಿಯಾನಗಳು, ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಜನರನ್ನು ಸೆಳೆಯುತ್ತಿದೆ ಎಂದು ಅಂಕಣ ಗುರುತಿಸಿದೆ.
INDIA ಕೂಟದ ದೌರ್ಬಲ್ಯ:ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೂಡಿ ರಚಿಸಿಕೊಂಡಿರುವ INDIA ಕೂಟದ ದೌರ್ಬಲ್ಯಗಳೇ ಬಿಜೆಪಿಯ ಮುನ್ನಡೆಗೆ ನೆರವಾಗಲಿವೆ. ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಮಾತ್ರ ನಿಚ್ಚಳ ಅಧಿಕಾರದಲ್ಲಿದೆ. ಮೈತ್ರಿಯಲ್ಲಿ ಆಗಾಗ್ಗೆ ಕಾಣಿಸುತ್ತಿರುವ ಭಿನ್ನಾಭಿಪ್ರಾಯ, ಒಳಜಗಳ ಬಿಜೆಪಿಯನ್ನು ಎದುರಿಸುವಲ್ಲಿ ಹಿನ್ನಡೆ ಉಂಟು ಮಾಡಲಿದೆ. ಇಂಡಿಯಾ ಕೂಟ ಕೆಲವೊಂದು ನಿರ್ಣಾಯ ವಿಷಯಗಳಲ್ಲಿ ಒಂದಾಗಿಲ್ಲ. ಆದರೂ, ಅದು ಬಿಜೆಪಿಯನ್ನು ಸಾಮೂಹಿಕವಾಗಿ ಎದುರಿಸಲು ಪ್ರತಿಜ್ಞೆ ಮಾಡಿದೆ. ಅದೇನೆ ಇದ್ದರೂ, ಭಾರತದಲ್ಲಿ ಬಿಜೆಪಿ ಗೆಲುವು ಸಾಧಿಸುವುದು 'ಅನಿವಾರ್ಯ'ವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮೋದಿ ವರ್ಚಸ್ಸು, ರಾಮಮಂದಿರ ಅಸ್ತ್ರ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಾಮಮಂದಿರ ಉದ್ಘಾಟನೆ, ನರೇಂದ್ರ ಮೋದಿ ಅವರ ವರ್ಚಸ್ಸು ಪ್ರಮುಖ ಅಸ್ತ್ರವಾಗಿವೆ. ಪ್ರಧಾನಿ ಭಾಷಣಗಳಲ್ಲಿ ರಾಷ್ಟ್ರೀಯತೆ, ಅಭಿವೃದ್ಧಿ ಯೋಜನೆಗಳು, ಭಾರತವನ್ನು ಜಾಗತಿಕ ಶಕ್ತಿಯಾಗಿ ಬೆಳೆಸುವ ಗುರಿ, ವಿದೇಶಾಂಗ ನೀತಿ, ಚಂದ್ರನ ಮೇಲೆ ಇಳಿದ ನೌಕೆ ಇವೆಲ್ಲವೂ ಗೆಲುವಿಗೆ ಕಾರಣವಾಗಲಿವೆ.
ಜನವರಿ 22 ರಂದು ರಾಮಮಂದಿರದ ಉದ್ಘಾಟನೆಯಾಗಲಿದ್ದು, ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿಯು ಇದನ್ನು ತನ್ನ ಕಾರ್ಯಸೂಚಿಯಲ್ಲಿ ಬಳಸಿಕೊಳ್ಳಲಿದೆ. ದೇವಾಲಯದ ಉದ್ಘಾಟನೆಯನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಬಿಜೆಪಿ ರೂಪಿಸಲಿದೆ ಎಂದು ಅಂಕಣದಲ್ಲಿ ಹೇಳಲಾಗಿದೆ. ಬಿಜೆಪಿಯ ಮೇಲೆ ಕೋಮುವಾದದ ಆರೋಪಗಳನ್ನು ಮಾಡಲಾಗುತ್ತಿದ್ದರೂ, ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರಿಶ್ಚಿಯನ್, ಬೌದ್ಧರು, ಸಿಖ್ಖರು ಯಾವ ರೀತಿ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬುದನ್ನು ತೋರಿಸಲು ಯಾರಿಗೂ ಧೈರ್ಯವಿಲ್ಲ. ಅದಕ್ಕೆ ಒಂದೇ ಒಂದು ಉದಾಹರಣೆ ಕೂಡ ವಿಪಕ್ಷಗಳು ನೀಡಲಾರವು ಎಂದು ಹೇಳಿದೆ.
ಇದನ್ನೂ ಓದಿ:ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆದ ಇಸ್ರೋ: 'ಎಕ್ಸ್‌ಪೋಸ್ಯಾಟ್' ಉಡ್ಡಯನ ಯಶಸ್ವಿ