ನವದೆಹಲಿ: ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಅಸ್ಸೋಂ ಮತ್ತು ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.
ಏಪ್ರಿಲ್ 6 ರಂದು ಉಭಯ ರಾಜ್ಯಗಳಲ್ಲಿ ಮೂರನೇ ಹಂತದ ಮತದಾನ ನಡೆಯಲಿದ್ದು ಈ ಹಿನ್ನೆಲೆ ಮೋದಿ ಎರಡೂ ರಾಜ್ಯಗಳಲ್ಲೂ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸೋಂ ಪ್ರಚಾರದ ಮೂರನೇ ಹಂತದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಪಿಎಂ ಮೋದಿ ಮತ್ತೆ ಮಾತನಾಡಲಿದ್ದಾರೆ.
ಶನಿವಾರ ಬೆಳಗ್ಗೆ ಅಸ್ಸೋಂನ ತಮುಲ್ಪುರದಿಂದ ಪ್ರಾರಂಭವಾಗುವ ಮೂರು ಸಾರ್ವಜನಿಕ ಸಭೆಗಳಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2: 45 ಕ್ಕೆ ತಾರಕೇಶ್ವರದಲ್ಲಿ ತಮ್ಮ ಎರಡನೇ ಸಾರ್ವಜನಿಕ ಸಭೆಗಾಗಿ ಬಂಗಾಳಕ್ಕೆ ತೆರಳಲಿದ್ದು, ನಂತರ ಸಂಜೆ 4: 15 ಕ್ಕೆ ಸೋನಾರ್‌ಪುರದಲ್ಲಿ ಸಭೆ ನಡೆಯಲಿದೆ. ಮೂರು ದಿನಗಳಲ್ಲಿ ಇದು ಎರಡನೇ ಬಾರಿಗೆ ಮೋದಿಯವರ ಅಸ್ಸೋಂ ಮತ್ತು ಬಂಗಾಳ ಭೇಟಿಯಾಗಿದೆ.
ಮೂರನೇ ಹಂತದ ಮತದಾನದ ಜೊತೆಗೆ ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಆದರೆ, ಮೇ 2 ರಂದು ಫಲಿತಾಂಶ ಘೋಷಣೆ ಮುನ್ನ ಬಂಗಾಳವು ಇನ್ನೂ ಐದು ಹಂತಗಳ ಮತದಾನ ಪ್ರಕ್ರಿಯೆ ನೋಡಲಿದೆ. ಇನ್ನು ಏಪ್ರಿಲ್ 6 ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೂಡ ಒಂದೇ ಹಂತದಲ್ಲಿ ಮತದಾನ ನಡೆಸಲಿವೆ.