ಮುಂಬೈ(ಮಹಾರಾಷ್ಟ್ರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ದೇಶದ ಅತಿದೊಡ್ಡ ಸಮುದ್ರ ಸೇತುವೆಯನ್ನು (ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು) ಇಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಲಿದ್ದಾರೆ.
ಡಿಸೆಂಬರ್ 2016ರಲ್ಲಿ 'ಅಟಲ್ ಸೇತು' ಎಂದು ಹೆಸರಿಸಲಾಗಿರುವ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರು ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬಯಾಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
'ಅಟಲ್ ಸೇತು' ಕುರಿತು..: ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ (MMRDA) 2017ರಲ್ಲಿ ಮಹಾರಾಷ್ಟ್ರ ಸರ್ಕಾರವು ಸೇತುವೆ ನಿರ್ಮಾಣದ ಜವಾಬ್ದಾರಿ ನೀಡಿತ್ತು. ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಯೋಜನೆಯ ಪ್ರಗತಿಗೆ ಅನುಕೂಲವಾಗುವಂತೆ ಸುಮಾರು 18,000 ಕೋಟಿ ರೂಪಾಯಿಗಳ ಅಧಿಕೃತ ಅಭಿವೃದ್ಧಿ ಸಾಲ ಒದಗಿಸಿದೆ.
ಮುಂಬೈ ಮತ್ತು ನವಿ ಮುಂಬೈ ನಡುವೆ (21.8 ಕಿ.ಮೀ) ಅಟಲ್ ಸೇತು ನಿರ್ಮಿಸಲಾಗಿದೆ. ಇದು ಜಾಗತಿಕವಾಗಿ 12ನೇ ಅತಿ ಉದ್ದದ ಸಮುದ್ರ ಸೇತುವೆ ಮತ್ತು ರಾಷ್ಟ್ರದ ಅತಿ ಉದ್ದದ ಸೇತುವೆಯಾಗಿದೆ. ಅಟಲ್ ಸೇತುವನ್ನು ಭೂಮಿಯ ಮೇಲೆ 5.5 ಕಿ.ಮೀ.ವರೆಗೆ ನಿರ್ಮಿಸಿದ್ದರೆ, ಸುಮಾರು 16.5 ಕಿ.ಮೀ. ದೂರ ಸಮುದ್ರದ ಮೇಲೆಯೇ ನಿರ್ಮಿಸಲಾಗಿದೆ. ಸೇತುವೆಯ ಪ್ರತಿ ಬದಿಯಲ್ಲಿ ಮೂರು ಪಥಗಳಿವೆ.
ಈ ಮೊದಲು ಡಿಸೆಂಬರ್ 25, 2023ರಂದು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ ವಿದ್ಯುದ್ದೀಕರಣ, ಕಂಬಗಳ ನಿರ್ಮಾಣ ಮತ್ತು ಟೋಲ್ ಬೂತ್‌ಗಳಂತಹ ಕೊನೆಯ ಕ್ಷಣದ ಹಲವು ಕೆಲಸಗಳು ಉದ್ಘಾಟನೆಯನ್ನು ಜನವರಿವರೆಗೆ ಮುಂದೂಡಿವೆ. ಸೇತುವೆ ನಿರ್ಮಾಣಕ್ಕೆ ಸುಮಾರು 17,843 ಕೋಟಿ ರೂಪಾಯಿ ವೆಚ್ಚವಾಗಿದೆ.
ಸಂಪರ್ಕ ಎಲ್ಲೆಲ್ಲಿ?: ದಕ್ಷಿಣ ಮುಂಬೈನ ಸೆವ್ರಿಯಿಂದ ಪ್ರಾರಂಭವಾಗುವ ಈ ಸೇತುವೆಯು ಥಾಣೆ ಕ್ರೀಕ್ ಮೂಲಕ ಹಾದುಹೋಗುತ್ತದೆ. ನವಾ ಶೇವಾ ಬಳಿಯ ಚಿರ್ಲೆ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ, ಮುಂಬೈ-ಗೋವಾ ಹೆದ್ದಾರಿ ಮತ್ತು ನಿರ್ಮಾಣ ಹಂತದಲ್ಲಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯು ಈ ಸೇತುವೆ ಸಂಪರ್ಕಿಸುವ ಕೆಲವು ಪ್ರಮುಖ ಸ್ಥಳಗಳು. ಸೇವ್ರಿ, ಶಿವಾಜಿ-ನಗರ, ಚಿರ್ಲೆ ಮತ್ತು ಇತರ ಆಯಕಟ್ಟಿನ ಸ್ಥಳಗಳ ಸಂಪರ್ಕ ಮತ್ತು ಸುಗಮ ಸಂಚಾರದ ಹರಿವನ್ನು ಖಾತರಿಪಡಿಸಲು ಸೇತುವೆಯು ಇಂಟರ್‌ಚೇಂಜ್‌ಗಳನ್ನೂ ಹೊಂದಿದೆ.
ಅನುಕೂಲಗಳು: ಇದು ಮುಂಬೈ ಮತ್ತು ಪುಣೆ ನಡುವಿನ ಸಂಚಾರ ಸಮಯವನ್ನು ಕಡಿಮೆ ಮಾಡುತ್ತದೆ. ಮುಂಬೈ ಮತ್ತು ಹೊಸದಾಗಿ ನಿರ್ಮಿಸಲಾದ ನವಿ ಮುಂಬೈ ವಿಮಾನ ನಿಲ್ದಾಣದ ನಡುವಿನ ಪ್ರಯಾಣ ಸಮಯವನ್ನೂ ತಗ್ಗಿಸುತ್ತದೆ. ಮುಂಬೈನಿಂದ ನವಿ ಮುಂಬೈಗೆ ಹೋಗಲು ಸುಮಾರು 2 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಆದರೆ ಸಮುದ್ರ ಸೇತುವೆಯಿಂದ ಪ್ರಯಾಣಿಸಿದರೆ ಕೇವಲ 20ರಿಂದ 30 ನಿಮಿಷಗಳು ಸಾಕು. ಹೆಚ್ಚುವರಿಯಾಗಿ ಈ ಯೋಜನೆಯು ಮುಂಬೈನ ಪ್ರವೇಶ ದ್ವಾರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲಿದೆ. ನವಿ ಮುಂಬೈನ ಹೊಸ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ ಈ ಸೇತುವೆಯು ಮುಖ್ಯ ಭೂಭಾಗದಿಂದ ಉತ್ತಮ ಸಂಪರ್ಕ ಹೊಂದಿದೆ. ಇದಲ್ಲದೆ ಮಧ್ಯ ಮತ್ತು ದಕ್ಷಿಣ ಮುಂಬೈನಿಂದ ಪಾನ್ವೆಲ್ಗೆ ಪ್ರಯಾಣವನ್ನು ಹೆಚ್ಚು ಸರಳಗೊಳಿಸುತ್ತದೆ. ಸೇತುವೆ ಬಳಕೆಯು CO2 ಹೊರಸೂಸುವಿಕೆಯನ್ನು ವರ್ಷಕ್ಕೆ 25,000 ಮಿಲಿಯನ್ ಟನ್‌ಗಳಿಗಿಂತಲೂ ಹೆಚ್ಚು ಕಡಿಮೆ ಮಾಡುತ್ತದೆ. ಒಂದು ಕೋಟಿ ಲೀಟರ್ ಇಂಧನ ಉಳಿಸುತ್ತದೆ ಎಂದು ಲೆಕ್ಕ ಹಾಕಲಾಗಿದೆ.
ಪ್ರಯಾಣದ ವೆಚ್ಚ:ಪ್ರತಿ ವಾಹನಕ್ಕೆ ಒಂದು ಬದಿ ಟೋಲ್ 250 ರೂಪಾಯಿ ಮತ್ತು ರಿಟರ್ನ್ ಟೋಲ್ 370 ರೂಪಾಯಿಗೆ ನಿಗದಿಪಡಿಸಲಾಗಿದೆ. ಇದು ಈಗ ಮುಂಬೈಯನ್ನು ಸಂಪರ್ಕಿಸುವ ಅತ್ಯಂತ ದುಬಾರಿ ಟೋಲ್ ರಸ್ತೆಯಾಗಿದೆ. ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯಲ್ಲಿ ಒಂದು ಬದಿ ಟೋಲ್ಗೆ 85 ರೂಪಾಯಿ ಇದ್ದರೆ, ರಿಟನ್ ಟೋಲ್ಗೆ 127 ರೂಪಾಯಿ ಪಾವತಿಸಬೇಕು.
ಅಟಲ್ ಸೇತು ಬಳಸುವ ಕಾರುಗಳಿಗೆ ವೇಗದ ಮಿತಿ ಇದೆ. ಕಾರು, ಟ್ಯಾಕ್ಸಿ, ಲಘು ಮೋಟಾರು ವಾಹನ, ಮಿನಿ ಬಸ್ ಮತ್ತು ಎರಡು ಆಕ್ಸಲ್ ಬಸ್‌ಗಳು ಸೇರಿದಂತೆ ವಾಹನಗಳಿಗೆ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ. ಇದೆ. ಸೇತುವೆಯ ಆರೋಹಣ ಮತ್ತು ಅವರೋಹಣಕ್ಕೆ ಅಧಿಕೃತ ವೇಗದ ಮಿತಿ 40 mph ಇದ್ದು, ಸುರಕ್ಷತೆಗಾಗಿ ಈ ನಿಯಮ ರೂಪಿಸಲಾಗಿದೆ.
ಕೆಲವು ವಾಹನಗಳಿಗೆ ನಿಷೇಧ: ಮೋಟರ್ ಬೈಕ್, ಆಟೋರಿಕ್ಷಾ ಮತ್ತು ಟ್ರ್ಯಾಕ್ಟರ್‌ಗಳಿಗೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನಲ್ಲಿ ಪ್ರವೇಶ ಇರುವುದಿಲ್ಲ. ಸಮುದ್ರ ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಕೆಲ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಕನಿಗೆ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್ಗೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಆದೇ