ನವದೆಹಲಿ: ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಸರ್ವಪಕ್ಷ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೃಷಿ ಕಾನೂನುಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಸರ್ಕಾರದ ಅಭಿಪ್ರಾಯ ಹೊರಹಾಕಿದ್ದಾರೆ.
ಈಗಲೂ ಕೃಷಿ ಕಾಯ್ದೆಗಳನ್ನ ಅಮಾನತಿನಲ್ಲಿಡಲು ನಾವು ಬದ್ಧ: ಪ್ರಧಾನಿ ಮೋದಿ - ಕೃಷಿ ಕಾನೂನು ಬಗ್ಗೆ ನಮೋ ಮಾತು
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ಬಗ್ಗೆ ಇದೇ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದ್ದು, ಅವರ ಸಮಸ್ಯೆ ಪರಿಹರಿಸಲು ನಿರಂತರವಾಗಿ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ. ಕೃಷಿ ಕಾನೂನು ಮುಂದಿನ 18 ತಿಂಗಳ ಕಾಲ ಅಮಾನತಿನಲ್ಲಿಡುವ ಆಫರ್ ಈಗಲೂ ಜೀವಂತವಾಗಿದೆ. ಇದೇ ವಿಚಾರವಾಗಿ ಕೃಷಿ ಸಚಿವರು ಕಳೆದ ತಿಂಗಳು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರದ ಪ್ರಸ್ತಾಪಕ್ಕೆ ಕೃಷಿ ಸಂಘಟನೆಗಳ ಪ್ರತ್ಯುತ್ತರಕ್ಕಾಗಿ ನಾವೂ ಈಗಲೂ ಕಾಯುತ್ತಿದ್ದೇವೆ ಎಂದಿದ್ದಾರೆ ಎಂದು ವರದಿಯಾಗಿದೆ.
ರೈತರು ತಿರಸ್ಕಾರ ಮಾಡಿರುವ ಪ್ರಸ್ತಾವನೆ ಈಗಲೂ ಹಾಗೇ ಉಳಿದುಕೊಂಡಿದೆ ಎಂದಿರುವ ನಮೋ, ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದಿದ್ದಾರೆ. ಇದೇ ವೇಳೆ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಮುಕ್ತವಾಗಿದೆ ಎಂದು ಹೇಳಿದ್ದಾರೆ.