ಅಹಮದಾಬಾದ್:2019 ರ ಮಾನಹಾನಿ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಕಾನೂನು ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ವಿರುದ್ಧದ ಶಿಕ್ಷೆಗೆ ತಡೆ ಕೋರಿ ಮುಂದಿನ ವಾರ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ತಿಳಿದುಬಂದಿದೆ.
ಮೋದಿ ಉಪನಾಮ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯದಲ್ಲಿ ಸತತ ಹಿನ್ನಡೆ ಉಂಟಾಗಿದೆ. ಕೆಳಹಂತದ ನ್ಯಾಯಾಲಯ ನೀಡಿದ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯು ಈಚೆಗಷ್ಟೇ ತಿರಸ್ಕೃತವಾಗಿತ್ತು. ಇದು ಮಾಜಿ ಸಂಸದರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
"ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯ ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದೆ. ಪಕ್ಷದ ಕೇಂದ್ರ ಕಾನೂನು ತಂಡ ಗುಜರಾತ್ ಹೈಕೋರ್ಟ್‌ನಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಲು ಉದ್ದೇಶಿಸಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರದೊಳಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲಾಗುವುದು" ಎಂದು ರಾಹುಲ್ ಗಾಂಧಿ ಪರ ವಕೀಲ ಬಾಬು ಮಂಗುಕಿಯಾ ಮಾಹಿತಿ ನೀಡಿದರು.
ಏಪ್ರಿಲ್ 20 ರಂದು ಸೂರತ್ ಸೆಷನ್ಸ್ ನ್ಯಾಯಾಲಯವು ರಾಹುಲ್ ಗಾಂಧಿ ಅವರ 2019 ರ "ಮೋದಿ ಉಪನಾಮ" ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಕೋರಲಾದ ಮನವಿಯನ್ನು ವಜಾಗೊಳಿಸಿತು. ಹೀಗಾಗಿ ರಾಹುಲ್ ತಮ್ಮ ಸಂಸತ್ ಸದಸ್ಯತ್ವವನ್ನು ಮರಳಿ ಪಡೆಯುವಲ್ಲಿ ಹಿನ್ನಡೆಯಾಗಿದೆ.
ಮೋದಿ ಉಪನಾಮ ಹೇಳಿಕೆ ಒಂದು ಸಮುದಾಯವನ್ನು ಮೂದಲಿಸುವ ಉದ್ದೇಶ ಹೊಂದಿರಲಿಲ್ಲ. ನನ್ನ ವಿರುದ್ಧ ಬೇಕೆಂತಲೇ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ ಕೂಡ ಹೆಚ್ಚಿನ ಶಿಕ್ಷೆ ವಿಧಿಸಿದೆ. ಹೀಗಾಗಿ ಶಿಕ್ಷೆಗೆ ತಡೆ ನೀಡಬೇಕು ಎಂದು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ರಾಹುಲ್ ಪರವಾಗಿ ವಕೀಲರು ವಾದ ಮಂಡಿಸಿದ್ದರು.
ಸೂರತ್ ಕೋರ್ಟ್ನಿಂದ ಶಿಕ್ಷೆ:ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ದೋಷಿಯಾಗಿದ್ದರು. ಸೂರತ್ ಕೋರ್ಟ್ ಇವರಿಗೆ 2 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಆದೇಶ ನೀಡಿತ್ತು. ಬಳಿಕ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿ ಜಾಮೀನು ಕೂಡ ಮಂಜೂರು ಮಾಡಿತ್ತು. ಇದರ ಪರಿಣಾಮವಾಗಿ ರಾಹುಲ್ ಸಂಸತ್ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದರು. ಇದಲ್ಲದೇ, ದೆಹಲಿಯಲ್ಲಿ ನೀಡಲಾಗಿದ್ದ ಅಧಿಕೃತ ನಿವಾಸವನ್ನೂ ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದ್ದರಿಂದ ರಾಹುಲ್ ಆ ಮನೆಯಿಂದ ನಿರ್ಗಮಿಸಿದ್ದಾರೆ.
ಪ್ರಕರಣವೇನು?:2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಕಾಂಗ್ರೆಸ್ನ ನಾಯಕನ ಈ ಹೇಳಿಕೆ ವಿವಾದ ಉಂಟಾಗಿ ಹಿಂದುಳಿದ ಸಮಾಜಕ್ಕೆ ಮಾಡಿದ ಅವಮಾನ ಎಂದು ದೂಷಿಸಿ, ಸೂರತ್ ಕೋರ್ಟ್ನಲ್ಲಿ ಬಿಜೆಪಿ ಶಾಸಕ ಪೂರ್ಣೇಶ್ ಎಂಬುವವರು ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ರಾಹುಲ್ರನ್ನು ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ, ಜೈಲು ಶಿಕ್ಷೆ ನೀಡಿದೆ. ಕೆಳಹಂತದ ಕೋರ್ಟ್ ನೀಡಿದ ಈ ತೀರ್ಪನ್ನು ರಾಹುಲ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದ್ರೆ ಈ ಅರ್ಜಿ ವಜಾಗೊಂಡಿದೆ.
ಓದಿ:ಮಾನಹಾನಿ ಕೇಸ್: ಶಿಕ್ಷೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ