ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರಿಂ ಕೋರ್ಟ್‌ನಲ್ಲಿ ಇಂದು (ಶುಕ್ರವಾರ) ದೊಡ್ಡ ರಿಲೀಫ್ ಸಿಕ್ಕಿದೆ. ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಅವರಿಗೆ ವಿಧಿಸಲಾಗಿದ್ದ 2 ವರ್ಷಗಳ ಶಿಕ್ಷೆಗೆ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ ರಾಹುಲ್ ಅವರ ಸಂಸತ್ ಸದಸ್ಯ ಸ್ಥಾನ ಸದ್ಯಕ್ಕೆ ಅಬಾಧಿತವಾಗಿದೆ.
ನ್ಯಾ.ಬಿ.ಆರ್.ಗವಾಯಿ, ನ್ಯಾ.ಪಿ.ಎಸ್.ನರಸಿಂಹ ಮತ್ತು ನ್ಯಾ.ಸಂಜಯ್ ಕುಮಾರ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ಈ ಆದೇಶ ಪ್ರಕಟಿಸಿ, "ಸಾರ್ವಜನಿಕ ಜೀವನದಲ್ಲಿರುವ ಜನರು ಭಾಷಣ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅದನ್ನೇ ಎಲ್ಲರೂ ನಿರೀಕ್ಷಿಸುತ್ತಾರೆ" ಎಂದು ಸಲಹೆ ನೀಡಿದೆ.
"ಗುಜರಾತ್ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ವಿಧಿಸುವಾಗ ಸೂಕ್ತ ಕಾರಣಗಳನ್ನು ನೀಡಿರುವುದಿಲ್ಲ. ಮುಂದಿನ ವಿಚಾರಣೆಯವರೆಗೂ ಶಿಕ್ಷೆಗೆ ತಡೆ ನೀಡಲಾಗುತ್ತದೆ" ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:Modi surname row: ಕ್ಷಮೆ ಕೇಳಲ್ಲ, ಹಾಗನ್ನಿಸಿದ್ದರೆ ಮೊದಲೇ ಕೇಳಿರುತ್ತಿದ್ದೆ; ಸುಪ್ರೀಂಕೋರ್ಟ್ಗೆ ರಾಹುಲ್ ಗಾಂಧಿ ಅಫಿಡವಿಟ್
ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, "ದೂರದಾರ ಪೂರ್ಣೇಶ್ ಮೋದಿ ಮೋದಿ ಅವರ ಮೂಲ ಉಪನಾಮ ಮೋದಿ ಅಲ್ಲ. ಈ ಉಪನಾಮವನ್ನು ನಂತರ ತಮ್ಮ ಹೆಸರಿನೊಂದಿಗೆ ಸೇರಿಕೊಂಡಿದ್ದಾರೆ" ಎಂದು ನ್ಯಾಯಪೀಠದ ಗಮನ ಸೆಳೆದರು.
ಮುಂದುವರೆದು, "ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಯಾವ ವ್ಯಕ್ತಿ ಕೂಡ ಮೊಕದ್ದಮೆ ಹೂಡಿಲ್ಲ. ಇದು 13 ಕೋಟಿ ಜನರಿರುವ ಸಣ್ಣ ಸಮುದಾಯವಾಗಿದ್ದು, ಏಕರೂಪತೆ ಹೊಂದಿಲ್ಲ. ಈ ವಿಷಯದಲ್ಲಿ ನೊಂದವರು ಬಿಜೆಪಿ ನಾಯಕರು ಹಾಗೂ ಮೊಕದ್ದಮೆ ಹೂಡಿದವರು ಮಾತ್ರ" ಎಂದು ಸಿಂಘ್ವಿ ಹೇಳಿದರು.
'ಇದು ದ್ವೇಷದ ವಿರುದ್ಧದ ಪ್ರೀತಿಯ ಗೆಲುವು': ರಾಹುಲ್ ಗಾಂಧಿ ವಿರುದ್ಧದ ಶಿಕ್ಷೆಗೆ ತಡೆದ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಮತ್ತು ಪಕ್ಷದ ನಾಯಕರು ಸ್ವಾಗತಿಸಿದ್ದಾರೆ. "ಯಾವುದೇ ಶಕ್ತಿಯೂ ಜನರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು. ಸತ್ಯಮೇವ ಜಯತೇ - ಜೈ ಹಿಂದ್'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿ, ''ಏನೇ ಬಂದರೂ ನನ್ನ ಕರ್ತವ್ಯ ಹಾಗೆಯೇ ಉಳಿಯಲಿದೆ, ಭಾರತದ ಕಲ್ಪನೆಯನ್ನು ರಕ್ಷಿಸಿ'' ಎಂದು ಹೇಳಿದ್ದಾರೆ. ಮತ್ತೊಂದೆಡೆ, ರಾಹುಲ್ ಗಾಂಧಿ ಸಂಸತ್ ಸ್ಥಾನದ ಅರ್ಹತೆಯನ್ನು ಪುನರ್ ಸ್ಥಾಪಿಸಬೇಕೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪಕ್ಷದ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಪ್ರಕರಣವೇನು? : 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು "ಮೋದಿ ಉಪನಾಮ ಹೊಂದಿದ ಎಲ್ಲರೂ ಏಕೆ ಕಳ್ಳರಾಗ್ತಾರೆ" ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಗುಜರಾತ್ ಬಿಜೆಪಿ ಶಾಸಕ, ಮಾಜಿ ಸಚಿವ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯವು 2023ರ ಮಾರ್ಚ್ 24ರಂದು ರಾಹುಲ್ ಗಾಂಧಿ ದೋಷಿ ಎಂದು ಘೋಷಿಸಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದರ ಪರಿಣಾಮ ಕೇರಳದ ವಯನಾಡು ಕ್ಷೇತ್ರ ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ ಸಂಸತ್ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು.
ಸೂರತ್ ನ್ಯಾಯಾಲಯವು ತೀರ್ಪು ಪ್ರಶ್ನಿಸಿ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕಳೆ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.