ಶಿಮ್ಲಾ: ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಬುಧವಾರ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಾವಲು ಪಡೆ ವಾಹನವನ್ನು ತಡೆದು ಆಂಬ್ಯುಲೆನ್ಸ್ ತೆರಳಲು ದಾರಿ ಮಾಡಿಕೊಟ್ಟರು.
ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕಾಂಗ್ರಾ ಜಿಲ್ಲೆಗೆ ಹೊರಟಿದ್ದಾಗ ದಾರಿಯಲ್ಲಿ ಆಂಬ್ಯುಲೆನ್ಸ್ ಬಂದಿದೆ. ಇದನ್ನು ಗಮನಿಸಿದ ಮೋದಿ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸುವಂತೆ ಸೂಚಿಸಿ, ಮೊದಲು ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು. ಆಂಬ್ಯುಲೆನ್ಸ್ ಹೋದ ನಂತರ ಪ್ರಧಾನಿ ಬೆಂಗಾವಲು ಪಡೆ ಚುನಾವಣಾ ಪ್ರಚಾರಕ್ಕೆ ತೆರಳಿತು.
ಈ ಕುರಿತಾದ ವಿಡಿಯೋವನ್ನು ಹಿಮಾಚಲ ಪ್ರದೇಶ ಬಿಜೆಪಿ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. "ಮಾನವೀಯತೆಗಿಂತ ಯಾವುದೂ ಮುಖ್ಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇದಕ್ಕೆ ಸಾಕ್ಷಿ ಈ ದೃಶ್ಯ" ಎಂದು ಬರೆದುಕೊಂಡಿದೆ.
ಇದನ್ನೂ ಓದಿ:ನ.11ಕ್ಕೆ ಮೋದಿ ಬೆಂಗಳೂರಿಗೆ ಭೇಟಿ.. ಕೆಂಪೇಗೌಡರ ಪುತ್ಥಳಿ ಅನಾವರಣ: ವಿಮಾನ ನಿಲ್ದಾಣ ಟರ್ಮಿನಲ್ 2 ಉದ್ಘಾಟನೆ
ಹಿಮಾಚಲ ಪ್ರದೇಶದ 2022 ರ ವಿಧಾನಸಭಾ ಚುನಾವಣೆಗೆ ನವೆಂಬರ್ 12 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಅಧಿಕಾರ ಉಳಿಸಿಕೊಳ್ಳುವತ್ತ ಬಿಜೆಪಿ ಗಮನಹರಿಸುತ್ತಿದೆ.