ನವದೆಹಲಿ: ಪ್ರಪಂಚದ ಆಧುನಿಕ, ದೊಡ್ಡ ದೇಶಗಳು ನಾಶ ಮಾಡುವುದು ಮಾತ್ರವಲ್ಲ, ಅತೀ ಹೆಚ್ಚು ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತಿವೆ ಎಂದು ಪ್ರಧಾನಿ ಮೋದಿ ಭಾನುವಾರ ಹೇಳಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ 'ಮಣ್ಣು ಉಳಿಸಿ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಗಾಲದ ಹೊರಸೂಸುವಿಕೆಯಲ್ಲಿ, ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ಅತ್ಯಲ್ಪವಾದರೂ ಸಹ ಭಾರತ ಪರಿಸರ ಸಂರಕ್ಷಣೆಗಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಸರ್ಕಾರದ ಹಲವಾರು ಯೋಜನೆಗಳು ಪರಿಸರ ಸಂರಕ್ಷಣೆಯ ಸಂದೇಶವನ್ನು ಹೊಂದಿವೆ. ಸ್ವಚ್ಛ ಭಾರತ್ ಮಿಷನ್, ನಯಾಮಿ ಗಂಗೆ, ಅಥವಾ ಒಂದು ಸೂರ್ಯ, ಒಂದು ಗ್ರಿಡ್ ಮೂಲಕ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ರೈತರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ "ಮಣ್ಣಿನ ಆರೋಗ್ಯ ಕಾರ್ಡ್‌ಗಳ" ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಒತ್ತು ನೀಡಿ ಮಾತನಾಡಿದ ಅವರು, ಹಿಂದೆ ನಮ್ಮ ರೈತರಿಗೆ ಮಣ್ಣಿನ ಪೋಷಕಾಂಶ ಮತ್ತು ಆರೋಗ್ಯದ ಬಗ್ಗೆ ಅಷ್ಟೊಂದು ಮಾಹಿತಿಯಿರಲಿಲ್ಲ. ಉತ್ತಮ ಮಣ್ಣಿನ ಆರೋಗ್ಯಕ್ಕೆ ಏನು ಬೇಕು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಮಣ್ಣಿನ ಆರೋಗ್ಯ ಕಾರ್ಡ್ ರೈತರಿಗೆ ನೀಡಿದೆ. ಅದಕ್ಕಾಗಿ ಮಣ್ಣಿನ ಆರೋಗ್ಯ ಕಾರ್ಡ್ ನೀಡುವ ಅಭಿಯಾನವನ್ನು ದೇಶಾದ್ಯಂತ ಸಂಯೋಜಿಸಲಾಯಿತು. ಈ ವರ್ಷದ ಬಜೆಟ್‌ನಲ್ಲಿ ಗಂಗಾ ನದಿ ಕಾರಿಡಾರ್ ಉದ್ದಕ್ಕೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.