ಪುದುಚೇರಿ: ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಹಾಗೂ ರಾಜ್ಯದ ಹಿಂದಿನ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲಾಸ್ ಪೆಟ್ಟೈನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ನಮ್ಮ ದೇಶಕ್ಕೆ ಬಂದ ವಸಾಹತುಶಾಹಿ ಆಡಳಿತಗಾರರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಹಾಗೆಯೇ ಕಾಂಗ್ರೆಸ್ ವಿಭಜನೆ, ಸುಳ್ಳು ಹೇಳುವ ಆಡಳಿತದ ನೀತಿಯನ್ನು ಹೊಂದಿದೆ. ಕೆಲವೊಮ್ಮೆ ಅವರ ನಾಯಕರು ಧರ್ಮದ, ಪ್ರದೇಶದ ಹಾಗೂ ಸಮುದಾಯದ ವಿರುದ್ಧ ಸಮುದಾಯ ತಿರುಗಿ ಬೀಳುವ ಹಾಗೆ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಪುದುಚೇರಿಯಲ್ಲಿ ಮುಂದಿನ ಸರ್ಕಾರ ಜನಹಿತ ಕೇಂದ್ರಿತವಾಗಲಿದೆ ಎಂದ ಅವರು ನಾರಾಯಣಸ್ವಾಮಿಯವರ ಆಡಳಿತವನ್ನು ಟೀಕೆ ಮಾಡಿದರು. ಅಸಹಾಯಕ ಮಹಿಳೆಯೊಬ್ಬರು ಪುದುಚೇರಿ ಸರ್ಕಾರ ಮತ್ತು ಪ್ರವಾಹದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನಿರ್ಲಕ್ಷ್ಯದ ಬಗ್ಗೆ ದೂರು ನೀಡಿದರೆ, ಆಕೆಯ ನೋವಿಗೆ ಸ್ಪಂದನೆ ನೀಡುವ ಬದಲು ಮಹಿಳೆಯ ಮಾತನ್ನೇ ತಿರುಚಿ ಹೇಳಿದ್ದಾರೆ. ಅವರು ಜನರಿಗೆ ಮತ್ತು ತಮ್ಮದೇ ನಾಯಕನಿಗೆ ಸುಳ್ಳು ಹೇಳುತ್ತಿದ್ದಾರೆ. ಸುಳ್ಳಿನ ಆಧಾರದ ಮೇಲೆ ಸಂಸ್ಕೃತಿ ಹೊಂದಿರುವ ಪಕ್ಷವು ಎಂದಾದರೂ ಜನರಿಗೆ ಸೇವೆ ಸಲ್ಲಿಸಬಹುದೇ ಎಂದು ಮೋದಿ ಪ್ರಶ್ನಿಸಿದರು.
ಕೇಂದ್ರದಲ್ಲಿ ಮೀನುಗಾರಿಕೆ ಸಚಿವಾಲಯ ಇಲ್ಲ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಎನ್‌ಡಿಎ ಸರ್ಕಾರ ಇದನ್ನು 2019 ರಲ್ಲಿ ಸ್ಥಾಪಿಸಿದೆ. ಅಂದಿನಿಂದ ಅದರ ಬಜೆಟ್ ಹಂಚಿಕೆ ಗಣನೀಯವಾಗಿ ಹೆಚ್ಚಾಗಿದೆ ಎಂದ ಅವರು, ಮುಂಬರುವ ಚುನಾವಣೆಗಳಲ್ಲಿ ಮತ ಚಲಾಯಿಸಿದರೆ ಎನ್‌ಡಿಎ ಸರ್ಕಾರ ಜನರನ್ನು ತನ್ನ ಹೈಕಮಾಂಡ್ ಎಂದು ಪರಿಗಣಿಸುತ್ತದೆ ಎಂದು ಹೇಳಿದರು.