ಪಂಜಾಬ್ನ ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿ ಅವರ ಭದ್ರತೆಯಲ್ಲಾದ ಲೋಪದ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮೂಲಕ ಪ್ರಧಾನಿ ಮೋದಿ ರಸ್ತೆ ಮಾರ್ಗ ಸಂಚಾರಕ್ಕೆ ಅಡ್ಡಿಪಡಿಸಿದ್ದ ರೈತ ಮುಖಂಡರು ಪ್ರತಿಕ್ರಿಯಿಸಿದ್ದು, ಈ ರಸ್ತೆಯಲ್ಲಿ ಮೋದಿ ಬರ್ತಾರೆ ಎಂದರೆ ನಾವು ನಂಬಲಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್(ಕ್ರಾಂತಿಕಾರಿ) ಅಧ್ಯಕ್ಷ ಸುರ್ಜಿತ್ ಸಿಂಗ್, ರಸ್ತೆ ಮಾರ್ಗದಲ್ಲಿ ಪ್ರಧಾನಿ ಮೋದಿ ಪ್ರಮಾಣಿಸುತ್ತಾರೆಂದು ಹಿರಿಯ ಎಸ್ಪಿ ನಮಗೆ ಮಾಹಿತಿ ನೀಡಿದ್ದರು. ಪ್ರಧಾನಿ ಬಂದರೆ ಒಂದು ಗಂಟೆ ಮೊದಲೇ ವಿಷಯ ತಿಳಿಯುತ್ತಾ? ಅಂತ ನಾವು ಪ್ರಶ್ನಿಸಿದೆವು. ನಮ್ಮನ್ನು ಅಲ್ಲಿಂದ ಕಳುಹಿಸಲು ಎಸ್ಪಿ ಹೀಗೆ ಹೇಳುತ್ತಿದ್ದಾರೆಂದು ಭಾವಿಸಿಕೊಂಡಿದ್ದೆವು ಎಂದರು.
ಪೊಲೀಸರು ಹೆಲಿಪ್ಯಾಡ್‌ಸಹಿತ ವ್ಯವಸ್ಥೆಗಳನ್ನು ಮಾಡಿಕೊಂಡರು. ಆದರೆ ಪ್ರಧಾನಿ ವಾಯು ಮಾರ್ಗದಲ್ಲಿ ಬರುತ್ತಾರೆಂದು ನಾವು ಭಾವಿಸಿಕೊಂಡಿದ್ದೆವು. ಬಿಜೆಪಿ ಕಾರ್ಯಕರ್ತರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕಳುಹಿಸಲು ಪೊಲೀಸರು ಹೀಗೆ ಮಾಡುತ್ತಿದ್ದಾರೆಂದು ಎಂದು ಅನಿಸಿತ್ತು ಎಂದಿರುವ ಸುರ್ಜಿತ್ ಸಿಂಗ್, ಒಂದು ವೇಳೆ ಪ್ರಧಾನಿ ಮೋದಿ ರಸ್ತೆ ಮಾರ್ಗದಲ್ಲಿ ಹೋಗಬೇಕಿದ್ದರೆ ರಸ್ತೆಯ ಎರಡೂ ಕಡೆ ಟ್ರಾಫಿಕ್ ಅನ್ನು ಮೊದಲೇ ನಿಯಂತ್ರಿಸಬೇಕಿತ್ತು ಎಂದಿದ್ದಾರೆ.
'ಇದೆಲ್ಲಾ ಸಹಾನೂಭೂತಿಗಾಗಿ'
ಪ್ರಧಾನಿ ಮೋದಿಗೆ ಭದ್ರತೆಯಲ್ಲಿ ಲೋಪವಾಗಿದ್ದರೆ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ. ಬಿಜೆಪಿ ಪಕ್ಷದವರೇ ಭದ್ರತೆಯ ಲೋಪ ಎಂದು ಹೇಳಿದ್ದಾರೆ. ಸಭೆಗೆ ಜನ ಬಂದಿಲ್ಲ ಎಂದು ಮುಖ್ಯಮಂತ್ರಿ ಚರಣ್‌ಜಿತ್ ಚೆನ್ನಿ ಹೇಳುತ್ತಿದ್ದಾರೆ. ಭದ್ರತೆಯ ಲೋಪದಿಂದ ಸಭೆ ರದ್ದಾಯಿತೇ ಅಥವಾ ಅನ್ನದಾತರ ಪ್ರತಿಭಟನೆಯಿಂದ ರದ್ದಾಯಿತಾ ಎಂಬುದರ ಕುರಿತು ಕೇಸ್ ದಾಖಲಿಸಿ ವಿಚಾರಣೆ ನಡೆಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಜನರಿಂದ ಸಹಾನುಭೂತಿಗಾಗಿ ಪ್ರಧಾನಿ ಮೋದಿ ಚೌಕಾಬಾರ ಆಡುತ್ತಿದ್ದಾರೆ ಎಂದು ಆರೋಪಿಸಿದರು. ಪಂಜಾಬ್ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಎಂತಹ ಭದ್ರತೆಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ? ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೋದಿ ಹೇಳಿರುವುದಾಗಿ ಸುದ್ದಿ ಬಂದಿದೆ. ಇದನ್ನು ನೋಡಿದಾಗ ಇದೆಲ್ಲಾ ಒಂದು ಡ್ರಾಮಾ ಅನಿಸುತ್ತಿದೆ. ಸಹಾನುಭೂತಿಗಾಗಿ ಮಾಡುತ್ತಿರುವ ಚೌಕಾಬಾರದ ಪ್ರಯತ್ನ ಅಷ್ಟೆ ಎಂದು ಟಿಕಾಯತ್ ಟೀಕಿಸಿದ್ದಾರೆ.