ಛತ್ತೀಸ್ಗಢ (ಅಭನ್‌ಪುರ):ಅಭನ್‌ಪುರದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಭೂಪೇಶ್ ಬಘೇಲ್ ವಿರುದ್ಧ ಬಿಜೆಪಿ ಶೇ.30ರಷ್ಟು ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದಲ್ಲಿಯೂ ಸಹ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಶೇಕಡಾ 40ರಷ್ಟು ಪ್ರಚಾರ ಮಾಡಿತು. ಅದನ್ನು ನಾವು ಬೇರುಸಹಿತ ಕಿತ್ತು ಹಾಕಿದ್ದೇವೆ ಎಂದಿದ್ದಾರೆ.
ದೇಶದಲ್ಲಿ ತುಂಬಾ ಬಿಕ್ಕಟ್ಟು ಇದೆ. ಮಣಿಪುರದಲ್ಲಿ ಜನರು ಪರಸ್ಪರ ಜಗಳವಾಡುತ್ತಿದ್ದಾರೆ. ಆದರೆ ಮೋದಿಜಿಗೆ ಒಂದು ದಿನವೂ ಅಲ್ಲಿಗೆ ಹೋಗಿ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಿಲ್ಲ. ನಾವು ದೇಶವನ್ನು ಹೀಗೆ ನಡೆಸುತ್ತೇವೆಯೇ? ಮೋದಿ ತಮ್ಮ ಸ್ನೇಹಿತರಾದ ಅದಾನಿ, ಅಂಬಾನಿಗಳಿಗೆ ಸಹಾಯ ಮಾಡುತ್ತಾರೆ. ಆದರೆ, ಛತ್ತೀಸ್‌ಗಢದಲ್ಲಿ ಎಸ್‌ಟಿ, ಎಸ್‌ಸಿಗಳು ತೊಂದರೆಗೀಡಾಗಿದ್ದಾರೆ. ಮೋದಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಛತ್ತೀಸ್‌ಗಢದಲ್ಲಿ ಇಡಿ ಮತ್ತು ಸಿಬಿಐ ದಾಳಿ ನಡೆಸಲಾಗುತ್ತಿದೆ. ಆದರೆ, ಛತ್ತೀಸ್‌ಗಢದ ಜನರು ಇದಕ್ಕೆ ಹೆದರುವುದಿಲ್ಲ ಮತ್ತು ಧೈರ್ಯದಿಂದ ಹೋರಾಡುತ್ತಾರೆ. ಇಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಹೆದರುವುದಿಲ್ಲ. ನಮ್ಮ ಪಕ್ಷ 125 ವರ್ಷಗಳ ಪಕ್ಷ. ಜೈಲಿಗೆ ಹೋಗಿ ಈ ದೇಶವನ್ನು ಉಳಿಸಿದ್ದೇವೆ. ಬಿಜೆಪಿ, ಆರೆಸ್ಸೆಸ್ ನಾಯಕರು ಎಂದಾದರೂ ಜೈಲಿಗೆ ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
70 ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ನಾವು 70 ವರ್ಷ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ನೀವು ಪ್ರಧಾನಿಯಾಗಿದ್ದೀರಿ. ನಾವು ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದೇವೆ. ನೀವು ಏನು ಮಾಡಿದ್ದೀರಿ?. ಮೊದಲಿಗೆ, ಬಿಜೆಪಿ ಕೂಡ ಕಾಂಗ್ರೆಸ್ ನಾಯಕರಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯನ್ನು ಹೊಗಳಿತ್ತು. ಆದರೆ ಇಂದು ಬಿಜೆಪಿ ಬೆಳಗ್ಗೆ ಎದ್ದ ತಕ್ಷಣ ನಿಂದನೆ ಆರಂಭಿಸುತ್ತದೆ. ಮೋದಿಯವರು ನಿಂದನೆ ಮತ್ತು ಸುಳ್ಳಿನ ಕಾರ್ಖಾನೆಯನ್ನು ತೆರೆದಿದ್ದಾರೆ ಎಂದು ಕಿಡಿಕಾರಿದರು.
ಸುಳ್ಳು ಈಗ ಯಾರು ಹೇಳುತ್ತಿದ್ದಾರೆ?:2014ರಲ್ಲಿ ಮೋದಿಯವರು ದೇಶಕ್ಕೆ ನಮ್ಮ ಸರ್ಕಾರ ಬಂದಾಗ ಹೊರಗಿನ ಕಪ್ಪುಹಣ ತಂದು ದೇಶವಾಸಿಗಳ ಖಾತೆಗೆ ತಲಾ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಹೇಳಿದ್ದರು. ಹಾಗಾದರೆ ಯಾರು ಸುಳ್ಳು ಹೇಳುತ್ತಿದ್ದಾರೆ?. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರಾ ಅಥವಾ ದೇಶದ ಜನರು ಸುಳ್ಳು ಹೇಳುತ್ತಿದ್ದಾರೆಯೇ?. 2 ಕೋಟಿ ಉದ್ಯೋಗಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ಮೋದಿಯವರದ್ದು ಸುಳ್ಳುಗಾರರ ಸರ್ಕಾರ ಎಂದು ಹೇಳುತ್ತಿದೆ. ಈ ರೀತಿ ಮಾತನಾಡುವವರು ನೆಹರೂ ಮತ್ತು ಗಾಂಧಿ ಕುಟುಂಬದ ಬಗ್ಗೆ ಸದಾ ಕಾಮೆಂಟ್ ಮಾಡುತ್ತಾರೆ. ಇದು ಬಿಜೆಪಿಯ ಕೆಲಸ. ಕಾಂಗ್ರೆಸ್ ಎಲ್ಲೆಲ್ಲಿ ವಿರೋಧ ಪಕ್ಷದಲ್ಲಿದೆಯೋ ಅಲ್ಲಿ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ಕಾಂಗ್ರೆಸ್‌ಗೆ ನೀಡುವಲ್ಲಿ ಕೇಂದ್ರಕ್ಕೆ ತೊಂದರೆಯಾಗಿದೆ. ಇದು ಅವರ ಆಸ್ತಿಯೇ?. ಇದು ನಮ್ಮ ಹಕ್ಕು. ಬಿಜೆಪಿಗೆ ಕೊಡಲು ಕಷ್ಟವಾಗುತ್ತಿದೆ ಎಂದಿದ್ದಾರೆ.