ಗಾಂಧಿನಗರ (ಗುಜರಾತ್): ನರೇಂದ್ರ ಮೋದಿ ದೇಶದ ಅತ್ಯಂತ ಯಶಸ್ವಿ ಪ್ರಧಾನಿ ಮತ್ತು ಪ್ರಸ್ತುತ ಪೀಳಿಗೆಯ ಶ್ರೇಷ್ಠ ಜಾಗತಿಕ ನಾಯಕ ಎಂದು ಖ್ಯಾತ ಉದ್ಯಮಿ, ಬಿಲಿಯನೇರ್ ಮುಖೇಶ್ ಅಂಬಾನಿ ಬಣ್ಣಿಸಿದ್ದಾರೆ. ಇದೇ ವೇಳೆ, ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತಿ ಪರಂಪರೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 150 ಶತಕೋಟಿ ಡಾಲರ್ (12 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ ಅಂಬಾನಿ, ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಹೂಡಿಕೆದಾರರ ಶೃಂಗಸಭೆ. ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ನಮ್ಮ ಪ್ರೀತಿಯ ನಾಯಕ ನರೇಂದ್ರಭಾಯಿ ಮೋದಿ. ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಪ್ರಧಾನಿ. ಮೋದಿ ಮಾತನಾಡುವಾಗ ಇಡೀ ಜಗತ್ತು ಕೇಳುವುದಷ್ಟೇ ಅಲ್ಲ, ಚಪ್ಪಾಳೆ ತಟ್ಟುತ್ತದೆ ಎಂದು ಹೇಳಿದರು.
ಮೋದಿ ಹೈ ತೋ ಮುಮ್ಕಿನ್ ಹೈ: ವಿದೇಶದಲ್ಲಿರುವ ನನ್ನ ಸ್ನೇಹಿತರು, ಲಕ್ಷಾಂತರ ಭಾರತೀಯರು ಜಪಿಸುತ್ತಿರುವ 'ಮೋದಿ ಹೈ ತೋ ಮುಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಘೋಷಣೆಯ ಅರ್ಥವೇನು ಎಂದು ನನ್ನನ್ನು ಕೇಳುತ್ತಾರೆ?, ಇದರರ್ಥ ಭಾರತದ ಪ್ರಧಾನಿ ತಮ್ಮ ದೂರದೃಷ್ಟಿ, ದೃಢತೆ ಮತ್ತು ಕಾರ್ಯದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ ಎಂದು ನಾನು ಅವರಿಗೆ ಹೇಳುತ್ತೇನೆ. ಇದನ್ನು ಅವರು ಒಪ್ಪುತ್ತಾರೆ ಮತ್ತು ಅವರು ಕೂಡ ಮೋದಿ ಹೈ ತೋ ಮಮ್ಕಿನ್ ಹೈ ಎಂದು ಹೇಳುತ್ತಾರೆ ಎಂಬುವುದಾಗಿ ಅಂಬಾನಿ ವಿವರಿಸಿದರು.