ನವದೆಹಲಿ :ಬಡವರಿಗೋಸ್ಕರ ಮೀಸಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯ ಕಳ್ಳತನ ತಡೆಗಟ್ಟಲು ದೇಶದಲ್ಲಿ 2014ರಿಂದ ಇಲ್ಲಿಯವರೆಗೆ ನಾಲ್ಕು ಕೋಟಿಗೂ ಹೆಚ್ಚಿನ ನಕಲಿ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. ಸಾಲಿನಲ್ಲಿ ನಿಲ್ಲುವ ಪ್ರತಿ ವ್ಯಕ್ತಿಗೆ ಸರ್ಕಾರದ ಯೋಜನೆಯ ಲಾಭ ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ(ಪಿಎಂಎವೈ) ಮಧ್ಯಪ್ರದೇಶದಲ್ಲಿ ಗ್ರಾಮೀಣ ಫಲಾನುಭವಿಗಳಿಗೆ ನಿರ್ಮಾಣಗೊಂಡಿರುವ 5.21 ಲಕ್ಷ ಮನೆ ಹಸ್ತಾಂತರ ಮಾಡಿದ ಬಳಿಕ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡವರಿಗೋಸ್ಕರ ನಿರ್ಮಾಣಗೊಂಡಿರುವ ಮನೆಗಳನ್ನ ಹಸ್ತಾಂತರ ಮಾಡಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ ಬಡವರಿಗೋಸ್ಕರ ಮನೆ ಒದಗಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ 2 ಕೋಟಿ ಸೇರಿದಂತೆ ಇಲ್ಲಿಯವರೆಗೆ ಪಿಎಂಎವೈ ಯೋಜನೆಯಡಿ 2.5 ಕೋಟಿ ಮನೆ ನಿರ್ಮಿಸಲಾಗಿದ್ದು, ದೇಶದಲ್ಲಿರುವ ಎಲ್ಲ ಬಡವರಿಗೂ ಸೂರು ಒದಗಿಸಿಕೊಡುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯುವ ಗೀಳು; ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು
ದೇಶದ ಪ್ರತಿ ನಿರ್ಗತಿಕ ಕುಟುಂಬ ಪ್ರಮುಖ ಮೂಲಸೌಕರ್ಯಗಳೊಂದಿಗೆ ಜೀವನ ನಡೆಸಬೇಕು. ಅದಕ್ಕಾಗಿ ನಾವು ನಿರಂತರವಾಗಿ ಕೆಲಸ ಮಾಡಲಿದ್ದು, ಕೆಳವರ್ಗದ ಸಬಲೀಕರಣಕ್ಕಾಗಿ ಹಂತ ಹಂತವಾಗಿ ಹೊಸ ಹೊಸ ಯೋಜನೆ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.