ನವದೆಹಲಿ : ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಗೆಲುವು ದೇಶದ ಜನತೆ ಮೋದಿಯವರ ಭರವಸೆಗಳ (ಮೋದಿ ಗ್ಯಾರಂಟಿ) ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದರ ಸ್ಪಷ್ಟ ಸಂಕೇತವಾಗಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ. "ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಧಾನಿ ನರೇಂದ್ರ ಮೋದಿಯವರ ಆಶ್ವಾಸನೆಯ ಮೇಲೆ ಜನರಿಗೆ ನಂಬಿಕೆ ಇದೆ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸಿವೆ" ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಲ್ಲಿ ಹೇಳಿದರು.
ರಾಜಸ್ಥಾನದ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿದ್ದ ಸಚಿವ ಜೋಶಿ, ಕಾಂಗ್ರೆಸ್ ಪಕ್ಷ ಮತ್ತು ಅದು ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದರು. "ಜನ ಮೂರು ರಾಜ್ಯಗಳಲ್ಲಿ ಬಿಜೆಪಿಯನ್ನು ಆಶೀರ್ವದಿಸಿದ್ದು, ಪ್ರಧಾನಿ ಮೋದಿಯವರ ನಾಯಕತ್ವವನ್ನು ಅನುಮೋದಿಸಿದ್ದಾರೆ ಮತ್ತು ಕಾಂಗ್ರೆಸ್ನ ಸುಳ್ಳು ಭರವಸೆಗಳನ್ನು ತಿರಸ್ಕರಿಸಿದ್ದಾರೆ" ಎಂದು ಹೇಳಿದರು.
ಈ ಬಗ್ಗೆ ರಾಯ್ಪುರದಲ್ಲಿ ಮಾತನಾಡಿದ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ರಮಣ್ ಸಿಂಗ್, "ಜನರು ಮೋದಿಯವರ ಗ್ಯಾರಂಟಿಗಳ ಮೇಲೆ ನಂಬಿಕೆ ಇಟ್ಟಿದ್ದಾರೆ" ಎಂದು ಹೇಳಿದರು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಜನರು ಮೋದಿಯವರಿಗೆ ಮತ್ತು ಅವರು ಮಾಡಿದ ಕೆಲಸಗಳ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಸಿಂಗ್ ತಿಳಿಸಿದರು.