ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಕೂಡ ಸುಗಮ ಕಲಾಪ ನಡೆಯಲಿಲ್ಲ. ಎರಡನೇ ಹಂತದ ಅಧಿವೇಶನದ ಆರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ನಲ್ಲಿ ದೇಶದ ಪ್ರಜಾಪ್ರಭುತ್ವದ ನೀಡಿದ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಡಳಿತಾರೂಢ ಬಿಜೆಪಿ ಉಭಯ ಸದನದಲ್ಲಿ ಒತ್ತಾಯಿಸಿತ್ತು. ಮತ್ತೊಂದೆಡೆ, ಉದ್ಯಮಿ ಗೌತಮ್ ಅದಾನಿ ವಿಷಯದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಬೇಲು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದ್ದವು. ಕೊನೆಯ ದಿನವಾದ ಇಂದು ಸಹ ಅದಾನಿ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದವು. ಇದರ ನಡುವೆ ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು.
ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ತಕ್ಷಣವೇ ಪ್ರತಿಪಕ್ಷಗಳು ಸಂಸದರು ಗುರುವಾರ ಸಂಸತ್ತಿನಿಂದ ವಿಜಯ್ ಚೌಕ್‌ಗೆ ತಿರಂಗಾ ಜಾಥಾ ಕೈಗೊಂಡಿದರು. ಇದರ ನಡುವೆ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಬಿಜೆಪಿ ಬೆಳಗ್ಗೆ ಸಂಸತ್ತಿನಲ್ಲಿ ಸಂಸದೀಯ ಪಕ್ಷದ ಸಭೆಯನ್ನು ನಡೆಸಿತು. ಏತನ್ಮಧ್ಯೆ, ಇಂದು ಲೋಕಸಭೆ ಸ್ಪೀಕರ್ ಆಯೋಜಿಸುವ Evening Tea ಸಭೆ ಕರೆದಿದ್ದಾರೆ. ಆದರೆ, ಇದರಿಂದ ಪ್ರತಿಪಕ್ಷಗಳು ದೂರ ಉಳಿಯಲು ನಿರ್ಧರಿಸಿವೆ ಎಂದು ವರದಿಯಾಗಿದೆ.
ಆಡಳಿತ ಪಕ್ಷದಿಂದ ಗೊಂದಲ ಸೃಷ್ಟಿ - ಖರ್ಗೆ ಟೀಕೆ: ತಿರಂಗಾ ಜಾಥಾದ ನಂತರ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಪ್ರತಿಪಕ್ಷಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹವಾಗಿದೆ. ಆದರೆ, ಇದರ ಗಮನವನ್ನು ಬೇರೆಡೆ ಸೆಳೆಯಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ. ಪ್ರಜಾಸತ್ತಾತ್ಮಕ ತತ್ವಗಳಡಿ ಸರ್ಕಾರ ನಡೆದುಕೊಳ್ಳುತ್ತಿಲ್ಲ ಮತ್ತು ಸಂಸತ್ತಿನಲ್ಲಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.