ಹೈದರಾಬಾದ್:ದೇಶದಲ್ಲಿನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳು ಹಾಗೂ ಮೋದಿಯ 2.0 ಸರ್ಕಾರಕ್ಕೆ ಇಂದಿಗೆ ಎರಡು ವರ್ಷಗಳು ಸಂದಿವೆ.
ಕೋವಿಡ್ ಸಂದರ್ಭದಲ್ಲಿ ಈ ದಿನವನ್ನು 'ಸೇವಾ ದಿನ'ವಾಗಿ ಆಚರಿಸಲು ಭಾರತೀಯ ಜನತಾ ಪಾರ್ಟಿ ನಿರ್ಧರಿಸಿದ್ದು, ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಚಿವರು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಒಂದು ಲಕ್ಷ ಗ್ರಾಮಗಳಿಗೆ ಭೇಟಿ ನೀಡಿ, ಕೊರೊನಾ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಎನ್‌ಡಿಎ 2.O ಸರ್ಕಾರದ ಎರಡನೇ ವರ್ಷದ ಸಂಭ್ರಮದಂದು ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ರಾಜ್ಯಾದ್ಯಂತ ರಕ್ತದಾನ ಮಾಡುವ ಮೂಲಕ ಕೋವಿಡ್ ಸಂದರ್ಭದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ಟ್ವೀಟ್ ಮಾಡಿ ಬಿಜೆಪಿ ಸರ್ಕಾರ 7 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
2ನೇ ಅವಧಿಯ 2 ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ
2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಮೇ 30ರಂದು ಅಧಿಕಾರ ಸ್ವೀಕರಿಸದರು. ಅನೇಕ ವಿರೋಧ, ಪ್ರತಿಪಕ್ಷಗಳ ಟೀಕೆಗಳ ನಡುವೆಯೂ ಕೆಲ ಕಾಯ್ದೆ, ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಆತ್ಮನಿರ್ಭರ ಭಾರತಕ್ಕೆ ಅಡಿಪಾಯ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ, ತ್ರಿವಳಿ ತಲಾಖ್ ರದ್ದತಿ, ಮೂರು ನೂತನ ಕೃಷಿ ಕಾಯ್ದೆಗಳು, ಗಾಲ್ವಾನ್ ಸಂಘರ್ಷದ ಬಳಿಕ ಚೀನಾ ವಿರುದ್ಧ ತೆಗೆದುಕೊಂಡ ಕ್ರಮಗಳು, ಅಟಲ್ ಸುರಂಗ ಉದ್ಘಾಟನೆ -ಇವು ಮೋದಿ ಸರ್ಕಾರದ ಪ್ರಮುಖ ಕಾರ್ಯಗಳಾಗಿವೆ.
ಸವಾಲಾದ ಕೊರೊನಾ
2020ರ ಜನವರಿಯಿಂದ ಮಹಾಮಾರಿ ಕೊರೊನಾ ಭಾರತಕ್ಕೆ ವಕ್ಕರಿಸಿಕೊಂಡಿದ್ದು, ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿಯ ಪಾತ್ರ ಸಾಕಷ್ಟಿದೆ. ಸಾಂಕ್ರಾಮಿಕದ ಆರಂಭದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ದೇಶಾದ್ಯಂತ ಲಾಕ್ಡೌನ್ ಹೇರಿ, ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಒದಗಿಸಿ, ಸಂಕಷ್ಟಕ್ಕೊಳಗಾದವರಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿ ಮತ್ತೆ ಭಾರತ ಸಹಜ ಸ್ಥಿತಿಗೆ ಮರಳುವತ್ತ ಪ್ರಯತ್ನಿಸಿದ್ದಾರೆ. ಆದರೆ ಕಳೆದೆರಡು ತಿಂಗಳಿನಿಂದ ದೇಶದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಿದ್ದು, ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.