ನವದೆಹಲಿ:ಕೆನಡಾದಲ್ಲಿ ಖಾಲಿಸ್ತಾನಿ ಉಗ್ರರು ಭಾರತ ವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಭಾರತೀಯ ರಾಜತಾಂತ್ರಿಕರಿಗೆ ಜೀವ ಬೆದರಿಕೆಗಳನ್ನೂ ಒಡ್ಡುತ್ತಿದ್ದಾರೆ. ಈ ಕುರಿತು ಭಾರತದ ಕಳವಳಕ್ಕೆ ಜಿ20 ಶೃಂಗಸಭೆ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದರು. ''ನಮ್ಮ (ಕೆನಡಾ) ದೇಶವು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ಆದರೆ, ದ್ವೇಷವನ್ನು ಸಹಿಸುವುದಿಲ್ಲ. ದ್ವೇಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ'' ಎಂದು ಹೇಳಿದ್ದಾರೆ.
ಜಿ20 ಶೃಂಗಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಟ್ರೂಡೊ ಮಾತುಕತೆ ನಡೆಸಿದರು. ನಂತರ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಈ ವಿಷಯಗಳ ಕುರಿತು ನಾವು ಹಲವಾರು ವರ್ಷಗಳಿಂದ ಮೋದಿ ಅವರೊಂದಿಗೆ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದೇವೆ. ಕೆನಡಾ ಯಾವಾಗಲೂ ದ್ವೇಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಿದೆ" ಎಂದರು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ಕೆನಡಾ ರಕ್ಷಿಸುತ್ತದೆ. ಅದು ನಮಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಹಿಂಸೆಯನ್ನು ನಿಲ್ಲಿಸಲು ಮತ್ತು ದ್ವೇಷದ ವಿರುದ್ಧ ಚಟುವಟಿಕೆಗಳನ್ನು ಹತ್ತಿಕ್ಕಲು ನಾವು ಯಾವಾಗಲೂ ಬದ್ಧ'' ಎಂಬ ಭರವಸೆ ನೀಡಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಟ್ರುಡೊ ಅವರೊಂದಿಗಿನ ಮಾತುಕತೆಯಲ್ಲಿ ಮೋದಿ ಭಾರತ-ಕೆನಡಾ ಬಾಂಧವ್ಯದ ಪ್ರಗತಿಗೆ ಪರಸ್ಪರ ಗೌರವ ಮತ್ತು ನಂಬಿಕೆ ಆಧಾರಿತ ಸಂಬಂಧ ಅತ್ಯಗತ್ಯ ಎಂದು ಪ್ರಸ್ತಾಪಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.