ಚೆನ್ನೈ (ತಮಿಳುನಾಡು):ಸನಾತನ ಧರ್ಮದ ಕುರಿತ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿರುವ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಹಾಗೂ ಬಿಜೆಪಿ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ್ದಾರೆ. ಕಳೆದ 9 ವರ್ಷಗಳಿಂದ ಮೋದಿ ಏನೂ ಮಾಡುತ್ತಿಲ್ಲ. ಈ ಬಗ್ಗೆ ಇಡೀ ದೇಶವು ಪ್ರಶ್ನಿಸಿದೆ. ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ರಾಜ್ಯ ಸಚಿವ ಹಾಗೂ ಡಿಎಂಕೆ ಯುವ ಘಟಕದ ಅಧ್ಯಕ್ಷರಾದ ಉದಯನಿಧಿ ಸ್ಟಾಲಿನ್ ಶನಿವಾರ ಸನಾತನ ಧರ್ಮ ಡೆಂಘಿ ಹಾಗೂ ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧ ಮಾಡಬಾರದು. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ಉದಯನಿಧಿ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಅಲ್ಲದೇ, ಈ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನೂ ದಾಖಲಿಸಲಾಗಿದೆ. ಗುರುವಾರ ಬಹಿರಂಗ ಪತ್ರ ಬರೆದಿರುವ ಉದಯನಿಧಿ ಸ್ಟಾಲಿನ್, ತಮ್ಮ ಹೇಳಿಕೆ ಸಂಬಂಧ ದಾಖಲಾದ ಎಲ್ಲ ಪ್ರಕರಣಗಳನ್ನು ಕಾನೂನುಬದ್ಧವಾಗಿಯೇ ಎದುರಿಸುವುದಾಗಿ ತಿಳಿಸಿದ್ದಾರೆ.
ಸುಳ್ಳು ಸುದ್ದಿಯೇ ಬಿಜೆಪಿಯವರಿಗೆ ಆಧಾರ: ಕಳೆದ 9 ವರ್ಷಗಳಿಂದ ಬಿಜೆಪಿಯ ಭರವಸೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ. ಜನಕಲ್ಯಾಣಕ್ಕಾಗಿ ನೀವು ನಿಖರವಾಗಿ ಏನು ಮಾಡಿದ್ದೀರಿ ಎಂಬುದು ಪ್ರಸ್ತುತ ನಿಶ್ಶಸ್ತ್ರ, ಫ್ಯಾಸಿಸ್ಟ್ ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶವು ಒಗ್ಗಟ್ಟಿನಿಂದ ಎತ್ತುತ್ತಿರುವ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿಎನ್‌ಪಿಡಬ್ಲ್ಯುಎಎ ಸಮಾವೇಶದಲ್ಲಿ ನನ್ನ ಭಾಷಣವನ್ನು 'ಜನಾಂಗೀಯ ಹತ್ಯೆಗೆ ಪ್ರಚೋದನೆ' ಎಂದು ಬಿಜೆಪಿ ನಾಯಕರು ತಿರುಚಿದ್ದಾರೆ. ಅವರು (ಬಿಜೆಪಿಯವರು) ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಸ್ತ್ರವೆಂದು ಪರಿಗಣಿಸುತ್ತಾರೆ ಎಂದು ಉದಯನಿಧಿ ಸ್ಟಾಲಿನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:Sanatana Dharma Row: ಉತ್ತರ ಪ್ರದೇಶದಲ್ಲಿ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್
ಆಶ್ಚರ್ಯದ ಸಂಗತಿಯೆಂದರೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಂತಹವರೇ ಸುಳ್ಳು ಸುದ್ದಿಯನ್ನು ಆಧರಿಸಿ ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಗೌರವಾನ್ವಿತ ಸ್ಥಾನಗಳಲ್ಲಿದ್ದೂ ಅಪಪ್ರಚಾರದಲ್ಲಿ ತೊಡಗಿರುವ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಮತ್ತು ಇತರ ನ್ಯಾಯಾಲಯದ ಮೊಕದ್ದಮೆಗಳನ್ನು ನ್ಯಾಯಯುತವಾಗಿ ನಾನು ದಾಖಲಿಸಬೇಕು. ಆದರೆ, ನನಗೆ ರಕ್ಷಿಸಿಕೊಳ್ಳುವ ವಿಧಾನ ಗೊತ್ತಿದೆ. ಬಿಜೆಪಿಯವರಿಗೆ ಅದು ಗೊತ್ತಿಲ್ಲ. ಹೀಗಾಗಿ ಮೊಕದ್ದಮೆಗಳನ್ನು ಹೂಡದಿರುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.