ನವದೆಹಲಿ:ಮುಂದಿನ ವರ್ಷದ ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ಆಹ್ವಾನ ನೀಡಿದೆ. ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ಇಂದು ಪ್ರಧಾನಿ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದರು. ಈ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪ್ರಧಾನಿ ನಿವಾಸದ ಕಚೇರಿಯಲ್ಲಿ ಮೋದಿ ಅವರನ್ನು ಸ್ವಾಮಿ ಈಶ್ವರಚರಣದಾಸ್ ಬಿಎಪಿಎಸ್ ನಿರ್ದೇಶಕರ ಮಂಡಳಿಯೊಂದಿಗೆ ಭೇಟಿಯಾದರು. ಕೇಸರಿ ಶಾಲು ಹೊದಿಸಿ ಪ್ರಧಾನಿಯನ್ನು ಅವರು ಗೌರವಿಸಿದರು. ಇದೇ ವೇಳೆ, ಸಂಸ್ಥೆಯ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ, ಐತಿಹಾಸಿಕ ಮತ್ತು ಸಾಂಪ್ರದಾಯಿಕ ದೇವಾಲಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಜಾಗತಿಕ ಸಾಮರಸ್ಯಕ್ಕಾಗಿ ನಿರ್ಮಿಸಿರುವ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವದ ಬಗ್ಗೆ ಚರ್ಚೆಗಳು ನಡೆದವು. ಇದೇ ವೇಳೆ, ಬಿಎಪಿಎಸ್ ನಿಯೋಗವು ಪ್ರಧಾನಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿತು. ಮತ್ತೊಂದೆಡೆ, ಪ್ರಮುಖ್ ಸ್ವಾಮಿ ಮಹಾರಾಜ್ ಅವರನ್ನು ಸ್ಮರಿಸಿದ ಪ್ರಧಾನಿ, ಅವರ ಶತಮಾನೋತ್ಸವ ಆಚರಣೆಯನ್ನು ನೆನಪಿಸಿಕೊಂಡರು. ಅಬುಧಾಬಿಯ ಹಿಂದೂ ಮಂದಿರ ನಿರ್ಮಾಣ ಯೋಜನೆಯಲ್ಲಿ ಭಾಗಿಯಾಗಿರುವ ಅಶೋಕ್ ಕೊಟೆಚಾ, ಉಪಾಧ್ಯಕ್ಷ ಯೋಗೇಶ್ ಮೆಹ್ತಾ ಮತ್ತು ನಿರ್ದೇಶಕ ಚಿರಾಗ್ ಪಟೇಲ್ ಸೇರಿದಂತೆ ಪ್ರಮುಖರು, ಸ್ವಯಂಸೇವಕರು ಮತ್ತು ಬೆಂಬಲಿಗರ ಪ್ರಯತ್ನಗಳು ಹಾಗೂ ಕೊಡುಗೆಗಳನ್ನು ಮೋದಿ ಶ್ಲಾಘಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.