ಚಂಡೀಗಢ :ಪಾಕಿಸ್ತಾನದ ಕರ್ತಾರ್ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ರೂಪದರ್ಶಿ ಸೌಲೇಹಾ ಫೋಟೋ ಶೂಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಚಾರ್ಜ್ ಡಿ ಅಫೇರ್ಸ್ಗೆ ಭಾರತ ಸರ್ಕಾರ ಸಮನ್ಸ್ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಪತ್ರಿಕ್ರಿಯೆ ನೀಡಿದ್ದು, ಕರ್ತಾರ್‌ಪುರದ ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್‌ನ ಪವಿತ್ರತೆಯನ್ನು ಪಾಕಿಸ್ತಾನದ ರೂಪದರ್ಶಿ ಹಾಗೂ ಬಟ್ಟೆಯೊಂದರ ಬ್ರಾಂಡ್ ಅಪವಿತ್ರಗೊಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ಚಾರ್ಜ್ ಡಿ ಅಫೇರ್ಸ್ಗೆ ಒತ್ತಾಯಿಸಲಾಗಿದೆ ಎಂದಿದ್ದಾರೆ.
ಇದರ ಜೊತೆಗೆ ಸಂಬಂಧಪಟ್ಟ ಪ್ರಾಧಿಕಾರಗಳು ಪ್ರಕರಣದ ಕುರಿತಂತೆ ತನಿಖೆ ನಡೆಸಬೇಕು. ಈ ಅಪರಾಧದಲ್ಲಿ ಭಾಗಿಯಾದ ಎಲ್ಲಾ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅರಿಂದಮ್ ಬಾಗ್ಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.