ಪಾಟ್ನಾ(ಬಿಹಾರ):ನವರಾತ್ರಿಯ ದುರ್ಗಾ ಪೂಜೆ ವೇಳೆ, ಕೆಲ ದುಷ್ಕರ್ಮಿಗಳು ಮಾಡೆಲ್ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಮಾಡೆಲ್ ಮನೆಯ ಹತ್ತಿರವೇ ಈ ಘಟನೆ ನಡೆದಿದೆ. ಗುಂಡಿನ ದಾಳಿಗೊಳಗಾದ ಮಾಡೆಲ್ ಅನ್ನು 36 ವರ್ಷದ ಅನಿತಾ ದೇವಿ (ಮೊನಾ ರಾಯ್) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅನಿತಾ ನಿವಾಸದ ಪಕ್ಕದ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಗಂಭೀರವಾಗಿ ಗಾಯಗೊಂಡಿದ್ದಾಳೆ. ದುರ್ಗಾ ಪೂಜೆ ಕಾರಣ ಸ್ಥಳದಲ್ಲಿ ಧ್ವನಿವರ್ಧಕಗಳ ಶಬ್ದದಿಂದಾಗಿ ಘಟನೆ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ಆದರೆ, ಮಾಡೆಲ್ ಜೊತೆಗಿದ್ದ 12 ವರ್ಷದ ಮಗಳು ಜೋರಾಗಿ ಅಳಲು ಶುರು ಮಾಡಿದ್ದಾಳೆ.