ರಾಂಚಿ, ಜಾರ್ಖಂಡ್:ರಾಜಧಾನಿಯಲ್ಲಿ ಬೃಹತ್ ಮೊಬೈಲ್ ಕಳ್ಳತನದ ಜಾಲ ಇರುವುದು ಪತ್ತೆಯಾಗಿದೆ. ಗೋದಾಮಿನಿಂದ 50 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನವಾಗಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಕಳೆದು ತಿಂಗಳು ಮೂರು ಕೋಟಿಗೂ ಅಧಿಕ ಬೆಲೆಬಾಳುವ ಮೊಬೈಲ್‌ಗಳು ಕಳ್ಳತನವಾಗಿರುವುದರ ಬಗ್ಗೆ ಗಮನಕ್ಕೆ ಬಂದಿದೆ.
50 ಲಕ್ಷ ಮೌಲ್ಯದ ಮೊಬೈಲ್‌ಗಳು ಕಳುವು:ಈ ಕಳ್ಳತನ ಕುರಿತು ಪ್ರಾಜೆಕ್ಟ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಲಿಮಿಟೆಡ್‌ನ ಗೋದಾಮಿನ ವ್ಯವಸ್ಥಾಪಕ ಮೊಹಮ್ಮದ್ ಜಮೀರ್ ಬಾರಿ ಖಾನ್ ಅವರು ದೂರು ಸಲ್ಲಿಸಿದ್ದಾರೆ. ಈ ಕಳ್ಳತನ ಕುರಿತು ನಗರದ ಪುಂಡಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪುಂಡಗಾನಲ್ಲಿರುವ ನಮ್ಮ ಗೋಡೌನ್‌ನಲ್ಲಿ ಅಪರಿಚಿತ ಕಳ್ಳರು ಸುಮಾರು 50 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಮೊಬೈಲ್ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಚ್ಚಿ ಬಿದ್ದ ಪೊಲೀಸರು: ಮೊಬೈಲ್ ಕಳವು ಪ್ರಕರಣದ ತನಿಖೆ ಕೈಗೊಂಡ ಪುಂಡಗಾ ಪೊಲೀಸ್ ಠಾಣೆಯ ಪೊಲೀಸರಿಗೆ ಕೆಲ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ತನಿಖೆಯ ವೇಳೆ ಜುಲೈ ತಿಂಗಳಲ್ಲೇ ವಿವಿಧ ರಾಜ್ಯಗಳಲ್ಲಿರುವ ಪ್ರಾಜೆಕ್ಟ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಲಿಮಿಟೆಡ್ ಗೋದಾಮುಗಳಿಂದ ಕೋಟ್ಯಂತರ ಮೌಲ್ಯದ ಮೊಬೈಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಜುಲೈ 15 ರಂದು ಪುಣೆಯಲ್ಲಿರುವ ಕಂಪನಿಯ ಗೋಡೌನ್‌ನಿಂದ 65 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳು, ಜುಲೈ 26 ರಂದು ಭುವನೇಶ್ವರದ ಗೋಡೌನ್‌ನಿಂದ 2 ಕೋಟಿ ರೂಪಾಯಿ ಮೌಲ್ಯದ ಮೊಬೈಲ್‌ಗಳು, ಅಸ್ಸೋಂ ರಾಜಧಾನಿ ಗುವಾಹಟಿಯಿಂದ ಲಕ್ಷ ಲಕ್ಷ ಮೌಲ್ಯದ ಮೊಬೈಲ್‌ಗಳು ಕಳ್ಳತನವಾಗಿರುವುದು ಕಂಪನಿ ಮತ್ತು ಪೊಲೀಸರ ಗಮನಕ್ಕೆ ಬಂದಿದೆ.
ಐದು ದಿನಗಳಿಂದ ಕೆಟ್ಟು ನಿಂತ ಸಿಸಿಟಿವಿ:ಇನ್ನು ಕಳ್ಳತವಾಗಿರುವ ಗೋದಾಮಿನ ಸಿಸಿಟಿವಿ ಕ್ಯಾಮೆರಾಗಳು ಕಳೆದ ಐದು ದಿನಗಳಿಂದ ಕೆಟ್ಟು ನಿಂತಿವೆ. ಈ ವೇಳೆ ಪೊಲೀಸರು ಕ್ಯಾಮೆರಾಗಳನ್ನು ಏಕೆ ದುರಸ್ತಿ ಮಾಡಿಲ್ಲ ಎಂದು ಗೋದಾಮು ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಆದ್ರೆ ಈ ವಿಷಯದ ಕುರಿತು ಗೋದಾಮು ಸಿಬ್ಬಂದಿ ಪೊಲೀಸರಿಗೆ ಸರಿಯಾಗಿ ಉತ್ತರ ನೀಡಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಪೊಲೀಸರ ತನಿಖೆ ಚುರುಕು:ಈ ಕಳ್ಳತನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯಲ್ಲಿ ಪೊಲೀಸರಿಗೆ ಸಿಗುತ್ತಿರುವ ಮಾಹಿತಿ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರು ಇತರ ರಾಜ್ಯಗಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಮತ್ತೊಂದೆಡೆ ಗೋಡೌನ್ ಸುತ್ತ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಪುಂಡಗಾ ಪೊಲೀಸ್ ಠಾಣೆ ಪ್ರಭಾರಿ ವಿವೇಕ್ ತಿಳಿಸಿದ್ದಾರೆ.
ಓದಿ:ಕಳ್ಳತನ ಪ್ರಕರಣ.. ಹಾಸನದಲ್ಲಿ ಅಂತಾರಾಜ್ಯ ಖದೀಮನ ಬಂಧನ