ಕೌಶಂಬಿ(ಉತ್ತರ ಪ್ರದೇಶ):ರಾಜ್ಯದ ಜಿಲ್ಲೆಯ ಹಳ್ಳಿಯೊಂದರಿಂದ ಮೊಬೈಲ್ ಟವರ್‌ನ ಸಂಪೂರ್ಣ ಉಪಕರಣಗಳು ಮತ್ತು ಸೆಟಪ್ ಅನ್ನು ಕಳ್ಳರು ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದು 9 ತಿಂಗಳ ಬಳಿಕ ಕಂಪನಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಮೊಬೈಲ್ ನೆಟ್‌ವರ್ಕ್‌ನ ಆವರ್ತನ ಒದಗಿಸಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಂಪನಿಯು ಸುಮಾರು 18 ಟವರ್‌ಗಳನ್ನು ಸ್ಥಾಪಿಸಿತ್ತು ಎಂದು ಹೇಳಲಾಗುತ್ತಿದೆ. ಕಂಪನಿಯ ತಂತ್ರಜ್ಞರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂದೀಪನ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಜಿಹಾನಿ ಖಾಲ್ಸಾ ಗ್ರಾಮದ ಮಜೀದ್ ಉಲ್ಲಾ ಅವರ ಪುತ್ರ ಉಬೈದ್ ಉಲ್ಲಾ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿತ್ತು. ಪ್ರತಾಪ್‌ಗಢ ಜಿಲ್ಲೆಯ ರಾಣಿಗಂಜ್ ಪೊಲೀಸ್ ಠಾಣೆಯ ರಸ್ತಿಪುರ ನಿವಾಸಿ ರಾಜೇಶ್ ಯಾದವ್ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯಲ್ಲಿ ತಂತ್ರಜ್ಞರಾಗಿ ನೇಮಕಗೊಂಡಿದ್ದಾರೆ. ಮಾರ್ಚ್ 31ರಂದು ರಾಜೇಶ್ ಯಾದವ್ ಭೇಟಿ ನೀಡಿದಾಗ, ಉಬೈದ್ ಉಲ್ಲಾ ಅವರ ಜಮೀನಿನಲ್ಲಿ ಸ್ಥಾಪಿಸಲಾದ ಸಂಪೂರ್ಣ ಟವರ್ ಮತ್ತು ಸೆಟಪ್ ಕಾಣೆಯಾಗಿತ್ತು.
ಜಮೀನಿನ ಮಾಲೀಕರನ್ನು ವಿಚಾರಣೆಗೊಳಪಡಿಸಿದಾಗ ಅವರು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದರು. ಇದಾದ ಬಳಿಕ ಕಂಪನಿಯ ಇಂಜಿನಿಯರ್ ಕಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೌಶಂಬಿಯ ವಿವಿಧ ಪ್ರದೇಶಗಳಲ್ಲಿ ಕಂಪನಿಯು 18ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗುತ್ತಿದೆ. ಇಡೀ ಟವರ್ ಕಾಣೆಯಾಗಿದ್ದರಿಂದ ಕಂಪನಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಪೊಲೀಸರು ಸಂಪೂರ್ಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.