ತೌಬಲ್ (ಮಣಿಪುರ):ಮಣಿಪುರದಲ್ಲಿ ಸಂಘರ್ಷ ಮುಂದುವರಿದಿದೆ. ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಶಿಬಿರದಿಂದ ಶಸ್ತ್ರಾಸ್ತ್ರಗಳನ್ನು ದೋಚಲು ಯತ್ನಿಸಿದ ಘಟನೆ ಮಂಗಳವಾರ ನಡೆಯಿತು. ಇದು ಭದ್ರತಾ ಪಡೆಗಳೊಂದಿಗೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಬಲಿಯಾಗಿದ್ದಾನೆ. ಅಸ್ಸಾಂ ರೈಫಲ್ಸ್ನ ಯೋಧ ಸೇರಿದಂತೆ 10 ಮಂದಿ ಗುಂಡೇಟಿಗೆ ಗಾಯಗೊಂಡಿದ್ದಾರೆ.
ಗುಂಪೊಂದು ಖಂಗಾಬೊಕ್ ಪ್ರದೇಶದಲ್ಲಿರುವ 3ನೇ ಐಆರ್‌ಬಿ ಬೆಟಾಲಿಯನ್‌ನ ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ದೋಚಲು ಪ್ರಯತ್ನಿಸಿತು. ತಕ್ಷಣವೇ ಎಚ್ಚೆತ್ತುಕೊಂಡ ಪಡೆಗಳು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುವ ಭಾಗವಾಗಿ ಗುಂಡಿನ ದಾಳಿ ಕೂಡ ನಡೆಸಲಾಗಿದೆ. ಮೊದಲಿಗೆ ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಲಾಗಿದೆ. ಆದರೆ, ಶಸ್ತ್ರಸಜ್ಜಿತ ದಾಳಿಕೋರ ಗುಂಪು ಗುಂಡು ಹಾರಿಸುತ್ತಿದ್ದಂತೆ, ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಕದಿಯಲು ಬಂದಿದ್ದ ಗುಂಪು ಶಿಬಿರದತ್ತ ಧಾವಿಸುವ, ಹೋಗುವ ಎಲ್ಲ ರಸ್ತೆಗಳನ್ನು ನಾಕಾಬಂಧಿ ಮಾಡಲಾಯಿತು. ಇದರಿಂದ ಕೆರಳಿದ ದಾಳಿಕೋರ ಗುಂಪು ಶಿಬಿರದೆಡೆಗೆ ತೆರಳುತ್ತಿದ್ದ ಅಸ್ಸಾಂ ರೈಫಲ್ಸ್ ತಂಡದ ಮೇಲೆ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಸ್ಸಾಂ ರೈಫಲ್ಸ್ ಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಯೋಧರೊಬ್ಬರು ಗುಂಡೇಟಿಗೆ ಗಾಯಗೊಂಡರು. ವಾಹನಗಳು ಬೆಂಕಿಗೆ ಆಹುತಿಯಾದವು.