ಅಲ್ವಾರ್ (ರಾಜಸ್ಥಾನ): ಮರ ಕಡಿಯಲು ಹೋಗಿದ್ದ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಹರ್ಸೋರಾ ಪೊಲೀಸ್ ಠಾಣೆ ವ್ಯಾಪ್ತಿಯ ನರೋಲ್ ಗ್ರಾಮದಲ್ಲಿ ಘಟನೆಯಲ್ಲಿ 27 ವರ್ಷದ ವಾಸಿಂ ಎಂಬಾತ ಕೊಲೆಯಾಗಿದ್ದಾನೆ. ಈತನ ಜೊತೆಗಿದ್ದ ಆಸಿಫ್ ಮತ್ತು ಅಜರುದ್ದೀನ್ ಎಂಬವರು ಗಾಯಗೊಂಡಿದ್ದಾರೆ. ಗುರುವಾರ ಮರ ಕಡಿಯಲು ಹೋಗಿದ್ದಾಗ ಇವರು ಮೇಲೆ 8 ರಿಂದ 10 ಜನರಿದ್ದ ಗುಂಪು ಹಲ್ಲೆ ನಡೆಸಿದೆ. ಪಿಕಪ್ ವಾಹನಕ್ಕೆ ಜೆಸಿಬಿ ಯಿಂದ ಅಡ್ಡಗಟ್ಟಿ ಈ ದಾಳಿ ಮಾಡಲಾಗಿದೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಕಾನ್ಸ್‌ಟೇಬಲ್ : ದೂರು ದಾಖಲು
ಈ ಬಗ್ಗೆ ಎಎಸ್ಪಿ ಜಾಗ್ರಾಮ್ ಮೀನಾ ಪ್ರತಿಕ್ರಿಯಿಸಿ, ''ಶುಕ್ರವಾರ ಮೂವರು ಮರ ಕಡಿಯಲು ಹೋದಾಗ ಗುಂಪು ದಾಳಿ ನಡೆಸಿರುವ ಬಗ್ಗೆ ದೂರು ಸ್ವೀಕರಿಸಲಾಗಿದೆ. ಈ ದಾಳಿಯಲ್ಲಿ ಹಲ್ಲೆಗೊಳಗಾಗಿದ್ದ ವಾಸಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಇಬ್ಬರಿಗೆ ಬಿಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ'' ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಈ ಘಟನೆಯ ಮಾಹಿತಿ ತಿಳಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತಾ ಶರ್ಮಾ ಕೂಡ ಬಿಡಿಎಂ ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಘಟನಾ ಸ್ಥಳಕ್ಕೆ ಪೊಲೀಸರು ಎಫ್‌ಎಸ್‌ಎಲ್ ತಂಡದೊಂದಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ. ಸದ್ಯ ಈ ಘಟನೆಯ ಸಂಬಂಧ ಕುಟುಂಬಸ್ಥರ ದೂರಿನ ಆಧಾರದ ಮೇಲೆ 8 ರಿಂದ 10 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಗುಂಪು ದಾಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗಿಯಾಗಿರುವ ಆರೋಪ ಸಹ ಕೇಳಿ ಬಂದಿದೆ. ಅರಣ್ಯ ಇಲಾಖೆಯ ತಂಡವು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ ಎಂಬ ಮಾಹಿತಿ ಯುವಕರಿಗೆ ಸಿಕ್ಕಿದೆ. ಆದ್ದರಿಂದ ಮರ ಬಿಟ್ಟು ಅಲ್ಲಿಂದ ಬಂದಿದ್ದಾರೆ. ಆದರೂ, ಅರಣ್ಯ ಇಲಾಖೆಯ ತಂಡವು ಯುವಕರನ್ನು ತಡೆದು ಥಳಿಸಿದೆ ಎಂದು ದೂರಲಾಗಿದೆ.
ಇದನ್ನೂ ಓದಿ:MP crime: ಗುಂಡು ಹಾರಿಸಿ ಇಬ್ಬರ ಹತ್ಯೆಗೈದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್! ಗರ್ಭಿಣಿ ಸೇರಿ 6 ಜನರಿಗೆ ಗಾಯ