ಗಯಾ:ಕಳ್ಳರ ಭಯದಿಂದ ತೊಂದರೆಗೀಡಾದ ಗ್ರಾಮಸ್ಥರು ಯುವಕನೊಬ್ಬನನ್ನು ಕಳ್ಳನೆಂದು ತಿಳಿದು ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ದೋಬಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಂಡು ಬಂದಿದೆ.
ಯುವಕನನ್ನು ಥಳಿಸಿರುವ ವೈರಲ್ ವಿಡಿಯೋ.. ಮಾಹಿತಿಯ ಪ್ರಕಾರ ಬುಧವಾರ ಮುಂಜಾನೆ 3 ಗಂಟೆಗೆ ಕೇಶಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಜಗನ್ನಾಥಪುರ ಗ್ರಾಮದ ಮಹೇಂದ್ರ ಪಾಸ್ವಾನ್ರ 19 ವರ್ಷದ ಮಗ ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. ಕಟ್ಟಿಗೆ ಮತ್ತು ಕೋಲುಗಳಿಂದ ಯುವನಿಗೆ ಹೊಡೆಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಈ ವಿಡಿಯೋ ಫೆಬ್ರವರಿ 9ರ ರಾತ್ರಿ ನಡೆದ ಘಟನೆಯಾಗಿದೆ. ವಿಡಿಯೋದಲ್ಲಿ ಯುವಕನನ್ನು ಕಳ್ಳನಂತೆ ಹಿಡಿದು ಮರಕ್ಕೆ ಕಟ್ಟಿ ಬಟ್ಟೆ ಬಿಚ್ಚಿ ಕೋಲುಗಳಿಂದ ತೀವ್ರವಾಗಿ ಹೊಡೆದಿದ್ದಾರೆ. ಆದರೆ, ಅಲ್ಲಿ ನೆರೆದಿದ್ದ ಜನ ಯುವಕನನ್ನು ಉಳಿಸಲು ಮುಂದೆ ಬರುವ ಸಾಹಸಕ್ಕೆ ಕೈ ಹಾಕಲಿಲ್ಲ.
ಜನರು ಅವನನ್ನು ಕಳ್ಳನೆಂದು ನಿರ್ದಯವಾಗಿ ಹೊಡೆದಿದ್ದಾರೆ. ಇದರಿಂದಾಗಿ ಆ ಯುವಕ ಗಂಭೀರವಾಗಿ ಗಾಯಗೊಂಡಿದ್ದ. ಯುವಕನ ಮೇಲೆ ಹಲ್ಲೆ ಮಾಡಿರುವ ಮಾಹಿತಿಯನ್ನು ದೋಬಿ ಪೊಲೀಸ್ ಠಾಣೆಗೆ ನೀಡಲಾಗಿತ್ತು. ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವಕನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಅಷ್ಟೊತ್ತಿಗಾಗಲೇ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ಮುನ್ನಡೆಸಿದ್ದಾರೆ.
ಗಮನಿಸಿ: ಈ ವೈರಲ್ ವಿಡಿಯೋ ಬಗ್ಗೆ ಈಟಿವಿ ಭಾರತ ಖಚಿತಪಡಿಸುವುದಿಲ್ಲ..