ದರ್ಭಾಂಗ (ಬಿಹಾರ): ಕಳ್ಳತನ ಆರೋಪ ಹೊರಿಸಿ ವ್ಯಕ್ತಿಯೋರ್ವನನ್ನು ಅಮಾನುಷವಾಗಿ ಥಳಿಸಿ ಮೂಳೆಗಳನ್ನೇ ಮುರಿಯಲಾಗಿದೆ. ಅಷ್ಟೇ ಅಲ್ಲ, ನೀರು ಕೇಳಿದಾಗ ಮೂತ್ರ ಕುಡಿಸಿದ ಕಿರಾತಕರು ತಮ್ಮ ದುಷ್ಟತನ ಪ್ರದರ್ಶಿಸಿದ್ದಾರೆ. ಹಲ್ಲೆಗೊಳಗಾದವ ದಲಿತ ಸಮುದಾಯದವನಾಗಿದ್ದು, ನಿರ್ದಿಷ್ಟ ಕೋಮಿನ ಜನರು ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರ ಈ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಭಾಂಗದ ಕಿಯೋಟಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋರಾ ಗ್ರಾಮದ ನಿವಾಸಿ ರಾಮ್ ಪ್ರಕಾಶ್ ಪಾಸ್ವಾನ್ ಎಂಬಾತನ ಮೇಲೆ ಕಳ್ಳತನದ ಆರೋಪ ಹೊರಿಸಿ ಚಿತ್ರಹಿಂಸೆ ನೀಡಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ರಾಮ್ ಪ್ರಕಾಶ್ ಪಾಸ್ವಾನ್ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಮನೆಯಿಂದ ಹೊರಗೆ ಎಳೆದು ತಂದು ಮತ್ತೆ ಹಲ್ಲೆ ನಡೆಸಿದ್ದಾರೆ.
ಮತ್ತಷ್ಟು ವಿವರ: ಆಗಸ್ಟ್ 16 ರ ರಾತ್ರಿ ಪಾಪಾ ಮಧುಬನಿಯಿಂದ ತನ್ನ ಚಿಕ್ಕಮ್ಮನ ಮನೆಗೆ ಹಿಂದಿರುಗುತ್ತಿದ್ದ. ಆ ಸಮಯದಲ್ಲಿ, ಆತ ರಹಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಜ್ರಾ ಗ್ರಾಮವನ್ನು ತಲುಪಿದಾಗ ಯಾರೋ ಅವನನ್ನು ತಡೆದಿದ್ದಾರೆ. ನಂತರ ಅಲ್ಲಿದ್ದ ಅಪಾರ ಸಂಖ್ಯೆಯ ಜನರು ಕಟ್ಟಿ ಹಾಕಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಈ ವಿಷಯ ತಿಳಿದು ಅವರನ್ನು ಬಿಡಿಸಲು ಸಂಬಂಧಿಕರು ಹೋದಾಗ 20 ಲಕ್ಷ ರೂ ಕಳ್ಳತನ ಆರೋಪ ಮಾಡಿ ಆ ಹಣವನ್ನು ಕೇಳಿದ್ದಾರೆ. ಆದರೆ, ಅವರನ್ನು ಕಾಪಾಡುವ ಉದ್ದೇಶದಿಂದ 50 ಸಾವಿರ ರೂ ನೀಡಿ ಅಲ್ಲಿಂದ ಬಿಡಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆತನ ಮಗಳು ಪೂಜಾ ಕುಮಾರಿ ಹೇಳಿದ್ದಾಳೆ.