ಗೋಮತಿ (ತ್ರಿಪುರ): ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಗೋಮತಿ ಜಿಲ್ಲೆಯ ಉದಯಪುರದಲ್ಲಿರುವ ಪೂರ್ವಜರ ಮನೆಯ ಮೇಲೆ ಮಂಗಳವಾರ ತಡರಾತ್ರಿ ಕೆಲವು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಅರ್ಚಕರ ಮೇಲೂ ಹಲ್ಲೆ ನಡೆಸಿದಿದೆ. ಉದಯಪುರದ ಜಮ್ಜುರಿ ಪ್ರದೇಶದ ರಾಜನಗರದಲ್ಲಿರುವ ದೇಬ್ ಅವರ ನಿವಾಸಕ್ಕೆ ಪುರೋಹಿತರ ಗುಂಪು ಆಗಮಿಸಿದ್ದಾಗ ಘಟನೆ ಸಂಭವಿಸಿದೆ.
ದೇಬ್ ಅವರ ತಂದೆಯ ವಾರ್ಷಿಕ ಶ್ರಾದ್ಧ ಸಮಾರಂಭವಿದ್ದು ಯಜ್ಞ ಕಾರ್ಯ ನೆರವೇರಿಸಲು ಅರ್ಚಕರು ಬಂದಿದ್ದರು. ಈ ವೇಳೆ ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಬಿಪ್ಲಬ್ ಕುಮಾರ್ ನಿವಾಸಕ್ಕೆ ನುಗ್ಗಿದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಅರ್ಚಕರನ್ನು ರಕ್ಷಿಸಲು ಮುಂದಾದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ವರದಿಗಳ ಪ್ರಕಾರ, ದುಷ್ಕರ್ಮಿಗಳು ಅರ್ಚಕರ ಮೇಲೆ ಮಾತ್ರ ದಾಳಿ ಮಾಡದೇ ಮನೆ ಮುಂದೆ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಕೂಡ ಧ್ವಂಸಗೊಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನೆ ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.
ಇದನ್ನೂ ಓದಿ:ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಅಪಾಯದಿಂದ ಕಂದಮ್ಮ ಪಾರು