ನವದೆಹಲಿ:ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಇದೀಗ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ವಿಡಿಯೋ ಹಂಚಿಕೊಂಡಿದ್ದು. ಇದರಲ್ಲಿ ಅದಾನಿ ವಿದೇಶಗಳಲ್ಲಿ ಹೇಗೆ ವ್ಯವಹಾರಗಳ ಲಾಭ ಗಳಿಸಿದ್ದಾರೆ ಎಂಬ ಬಗ್ಗೆ ಖುದ್ದು ವಿವರಿಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಈ ವಿಶ್ಲೇಷಣೆಯ ವಿಡಿಯೋ ಹಂಚಿಕೊಂಡಿರುವ ರಾಹುಲ್, ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಪಾಲುದಾರಿಕೆಗೆ 'ಮೋದಾನಿ' ಎಂದು ಹೆಸರಿದ್ದಾರೆ. ಇವರಿಬ್ಬರು ಭಾರತದ ವಿದೇಶಾಂಗ ನೀತಿಯನ್ನು ವಿದೇಶಿ ‘ಡೀಲ್’ ನೀತಿಯನ್ನಾಗಿ ಪರಿವರ್ತಿಸಿದ್ದಾರೆ. ವಿಶ್ವದಲ್ಲಿ ತನ್ನ ವ್ಯಾಪಾರ ವಿಸ್ತರಣೆಗೆ ಅದಾನಿ ಜೊತೆ ವಿದೇಶ ಪ್ರವಾಸ ಕೈಗೊಂಡು ಮೋದಿ ದೇಶವನ್ನು ಕತ್ತಲಲ್ಲಿಟ್ಟಿದ್ದಾರೆ ಎಂದೂ ರಾಹುಲ್ ಆರೋಪಿಸಿದ್ದಾರೆ.
ಮಾಧ್ಯಮ ವರದಿಗಳ ಉಲ್ಲೇಖ: ಉದ್ಯಮಿ ಅದಾನಿ ಜೊತೆಗೆ ಪ್ರಧಾನಿ ಎಷ್ಟು ವಿದೇಶ ಪ್ರವಾಸಗಳು ಕೈಗೊಂಡಿದ್ದಾರೆ?. ಮೋದಿ ಅವರ ನಿರ್ದಿಷ್ಟ ದೇಶಗಳಿಗೆ ಅಧಿಕೃತ ಪ್ರವಾಸ ಮುಗಿದ ನಂತರ ಉದ್ಯಮಿ ಎಷ್ಟು ದೇಶಗಳಿಗೆ ಭೇಟಿ ನೀಡಿದ್ದರು?, ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದರು ಎಂಬ ರಾಹುಲ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ, 2013ರಲ್ಲಿ ಡೆಪ್ಯುಟಿ ಪ್ರೀಮಿಯರ್ ನೇತೃತ್ವದ ಆಸ್ಟ್ರೇಲಿಯಾದ ನಿಯೋಗವು ಗುಜರಾತ್‌ನಲ್ಲಿ ಅದಾನಿ ಸಮ್ಮುಖದಲ್ಲಿ ಮೋದಿ ಅವರನ್ನು ಭೇಟಿ ಮಾಡಿತ್ತು. ಇದರ ನಂತರ 2014ರ ಮೇ ತಿಂಗಳಲ್ಲಿ ಅದಾನಿ ಆಸ್ಟ್ರೇಲಿಯಾದಲ್ಲಿ 15.5 ಮಿಲಿಯನ್ ಡಾಲರ್ ಕಲ್ಲಿದ್ದಲು ಮತ್ತು ರೈಲ್ವೆ ಯೋಜನೆಯನ್ನು ಸ್ವಾಧೀನಪಡಿಸಿಕೊಂಡರು. 2014ರ ನವೆಂಬರ್ನಲ್ಲಿ ಮೋದಿ ಆಸ್ಟ್ರೇಲಿಯಾದಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗ ಅದಾನಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು ಎಂದು ವಿವರಣೆ ನೀಡಿದ್ದಾರೆ.
ಈ ಪ್ರವಾಸದಲ್ಲಿ ಅದಾನಿ ಮತ್ತು ಆಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಒಪ್ಪಂದ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಯೋಜನೆಗೆ ನಿಧಿಯನ್ನು ನೀಡಲು ಅದಾನಿ ಗ್ರೂಪ್‌ಗೆ ಎಸ್‌ಬಿಐನಿಂದ ಒಂದು ಬಿಲಿಯನ್ ಡಾಲರ್ ಸಾಲಕ್ಕೆ ಎಂಒಯುಗೆ ಸಹಿ ಹಾಕಿದ್ದರು ಎಂದು ರಾಹುಲ್ ದೂರಿದ್ದಾರೆ. ಮೋದಿ -ಅದಾನಿ ಪ್ರವಾಸದ ಇನ್ನೊಂದು ನಿದರ್ಶನವನ್ನು ವಿವರಿಸಿರುವ ರಾಹುಲ್, 2015ರ ಜೂನ್ನಲ್ಲಿ ಮೋದಿ ಬಾಂಗ್ಲಾದೇಶಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸಕ್ಕೆ ಹೋಗಿದ್ದರು. ಅದಾನಿ ಪವರ್ 1600 ಎಂಡಬ್ಲ್ಯೂ ಉಷ್ಣ ವಿದ್ಯುತ್ ಸ್ಥಾವರವನ್ನು ಅಭಿವೃದ್ಧಿಪಡಿಸಲು ಬಾಂಗ್ಲಾದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದವು ಅದಾನಿ ಪವರ್ ಬಾಂಗ್ಲಾದೇಶದ ವಿದ್ಯುತ್ ಮಾರುಕಟ್ಟೆ ಬೆಲೆಗಿಂತ ಐದು ಪಟ್ಟು ಹೆಚ್ಚು ದುಬಾರಿಯಾಗಿದೆ ಎಂದು ಮಾಧ್ಯಮ ವರದಿಗಳು ಎತ್ತಿ ತೋರಿಸಿವೆ ಎಂದು ವಿಶ್ಲೇಷಿಸಿದ್ದಾರೆ.
ಹಲವಾರು ದೇಶಗಳಲ್ಲಿ ಒಪ್ಪಂದ: ಅಲ್ಲದೇ, 2022ರ ಮಾರ್ಚ್ನಲ್ಲಿ ಅದಾನಿ ಗ್ರೂಪ್ 500 ಮಿಲಿಯನ್ ಡಾಲರ್ ಮೌಲ್ಯದ ಎರಡು ನವೀಕರಿಸಬಹುದಾದ ವಿದ್ಯುತ್ ಯೋಜನೆಗಳನ್ನು ಪಡೆದುಕೊಂಡಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ನವೀಕರಿಸಬಹುದಾದ ಯೋಜನೆಗಳನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವಂತೆ ಪ್ರಧಾನಿ ಮೋದಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದ್ವೀಪ ರಾಷ್ಟ್ರ ಶ್ರೀಲಂಕಾ ಇಂಧನ ಮುಖ್ಯಸ್ಥರು ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಶ್ರೀಲಂಕಾ ಸಂಸತ್ತಿನಲ್ಲಿ ವಿದ್ಯುತ್ ಸ್ವಾಧೀನ ಒಪ್ಪಂದಗಳಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ನೀತಿಯನ್ನು ತೆಗೆದುಹಾಕಲು ಕಾನೂನನ್ನು ಅಂಗೀಕರಿಸಲಾಗಿದೆ ಎಂದು ರಾಹುಲ್ ದೂರಿದ್ದಾರೆ. ಮೋದಿ ಸರ್ಕಾರ ಮತ್ತು ಅದಾನಿ ಸಮೂಹದ ನಡುವಣ ವಿದೇಶಗಳಲ್ಲಿ ಒಪ್ಪಂದಗಳು ಇಸ್ರೇಲ್, ಜಪಾನ್, ಸ್ವೀಡನ್, ಮ್ಯಾನ್ಮಾರ್, ವಿಯೆಟ್ನಾಂ, ಮೊಜಾಂಬಿಕ್ ಮತ್ತು ಹಲವಾರು ದೇಶಗಳಲ್ಲಿ ಮುಂದುವರೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಅದಾನಿ ಗ್ರೂಪ್‌ನ ಸಾಲದ ವಿವರ ಬಹಿರಂಗಕ್ಕೆ ಕೇಂದ್ರದ ನಿರಾಕರಣೆ