ಮುಂಬೈ:ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ವಕ್ತಾರ ಮತ್ತು ಮಾಜಿ ಕಾರ್ಪೊರೇಟರ್ ಸಂದೀಪ್ ದೇಶಪಾಂಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಶುಕ್ರವಾರ ದಾದರ್ನ ಶಿವಾಜಿ ಪಾರ್ಕ್ನಲ್ಲಿ ಬೆಳಗಿನ ವಾಕ್ ಮಾಡುವಾಗ ಅವರ ಮೇಲೆ ಅಪರಿಚಿತರು ಕ್ರಿಕೆಟ್ ಸ್ಟಂಪ್ಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದಾಗ ದೇಶಪಾಂಡೆ ಒಬ್ಬರೇ ಇದ್ದರು. ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಹಿಂದೂಜಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಕೋರರ ಗುರುತು ಇನ್ನೂ ಪತ್ತೆಯಾಗಿಲ್ಲ ಮತ್ತು ಹಲ್ಲೆಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ದೇಶಪಾಂಡೆಯವರ ಪಕ್ಷದ ಸಹೋದ್ಯೋಗಿ ಸಂತೋಷ್ ಧುರಿ, ನಾವೆಲ್ಲರೂ ಪ್ರತಿದಿನ ಉದ್ಯಾನವನದಲ್ಲಿ ಬೆಳಗ್ಗೆ ವಾಕ್ ಮಾಡಲು ಬರುತ್ತೇವೆ. ಇಂದು ದೇಶಪಾಂಡೆ ನಮ್ಮೆಲ್ಲರಿಗಿಂತ ಬೇಗನೆ ಬಂದಿದ್ದರು ಮತ್ತು ಅವರು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಸ್ಟಂಪ್ಗಳಿಂದ ಹಲ್ಲೆ ನಡೆಸಿದೆ. ಕಳೆದ ಕೆಲ ದಿನಗಳಿಂದ ಬೆಳಗಿನ ವಾಕಿಂಗ್ ವೇಳೆ ಅವರ ಚಲನವಲನವನ್ನು ಗಮನಿಸುತ್ತಿದ್ದ ಗುಂಪು ಏಕಾಂಗಿಯಾಗಿದ್ದ ಅವರ ಮೇಲೆ ಹಲ್ಲೆ ನಡೆಸಿದೆ. ದೇಶಪಾಂಡೆ ಯಾರೊಂದಿಗೂ ವೈಯಕ್ತಿಕ ದ್ವೇಷವನ್ನು ಹೊಂದಿರಲಿಲ್ಲ ಎಂದು ಹೇಳಿದರು.
ದೇಶಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು, ಇದರಲ್ಲಿ ತಮ್ಮ ಪಕ್ಷದ ಪ್ರಚಾರ ಮಾಡುತ್ತಾರೆ. ಅಲ್ಲದೆ ರಾಜಕೀಯ ವಿರೋಧಿಗಳನ್ನು ಎದುರಿಸಲು ಕೂಡ ಅವರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಸಂದೀಪ್ ದೇಶಪಾಂಡೆ ಅವರನ್ನು ದಾದರ್ನ ಹಿಂದೂಜಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಮನವೀಸೆ ಅಧ್ಯಕ್ಷ ಅಮಿತ್ ಠಾಕ್ರೆ, ಮುಖಂಡ ನಿತಿನ್ ಸರ್ದೇಸಾಯಿ ಹಿಂದೂಜಾ ಆಸ್ಪತ್ರೆಗೆ ಭೇಟಿ ನೀಡಿ ದೇಶಪಾಂಡೆಯವರ ಆರೋಗ್ಯ ವಿಚಾರಿಸಿದರು. ಸೂಕ್ತ ಚಿಕಿತ್ಸೆ ಬಳಿಕ ಸಂದೀಪ್ ದೇಶಪಾಂಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.