ಕಾಕಿನಾಡ(ಆಂಧ್ರಪ್ರದೇಶ): ಕಳೆದ ನಾಲ್ಕೈದು ದಿನಗಳಿಂದ ಆಂಧ್ರದಲ್ಲಿ ಸಂಚಲನ ಮೂಡಿಸಿದ ಕಾರು ಚಾಲಕ ಸುಬ್ರಹ್ಮಣ್ಯ ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಮಾಜಿ ಕಾರು ಚಾಲಕ ಸುಬ್ರಹ್ಮಣ್ಯಂನ ಕೊಲೆ ನಾನೇ ಮಾಡಿದ್ದು ಎಂದು ಆಂಧ್ರಪ್ರದೇಶ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣದ ವಿವರ:ಎಂಎಲ್ಸಿ ಅನಂತಬಾಬು ಬಳಿ ಸುಬ್ರಮಣ್ಯಂ ಎಂಬ ವ್ಯಕ್ತಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಗರ್ಭಿಣಿಯಾಗಿರುವ ಕಾರಣಕ್ಕೆ ಇತ್ತೀಚೆಗೆ ಆತ ಚಾಲಕ ಹುದ್ದೆ ತೊರೆದಿದ್ದಾರೆ. ಆದ್ರೆ ಸುಬ್ರಮಣ್ಯಂ ಮದುವೆಯ ವೇಳೆ ಎಂಎಲ್ಸಿ ಅನಂತಬಾಬು 20 ಸಾವಿರ ರೂ ಸಾಲ ನೀಡಿದ್ದರಂತೆ.
ಮೇ 19 ರಾತ್ರಿ ನಡೆದ ಘಟನೆ: ರಾತ್ರಿ 8 ಗಂಟೆಗೆ ಮನೆಯಿಂದ ಹೊರಬಂದ ಸುಬ್ರಮಣ್ಯಂ (ಸುಬ್ಬು) ಸ್ನೇಹಿತರೊಂದಿಗೆ ಶ್ರೀರಾಮನಗರ ಬಡಾವಣೆಯ ಹಳೇ ನವಭಾರತ ಶಾಲೆಯ ಆವರಣದಲ್ಲಿ ಮದ್ಯ ಸೇವಿಸಲು ಹೋಗಿದ್ದರು. ರಾತ್ರಿ 10.15ರವರೆಗೂ ಮದ್ಯ ಸೇವಿಸಿದ್ದಾರೆ. ಹಿಂತಿರುಗುವಾಗ ಅನಂತಬಾಬು ಅದೇ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬಂದಿದ್ದಾರೆ. ಪಾನಮತ್ತನಾಗಿದ್ದ ಸುಬ್ಬುನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಉಳಿದ ಗೆಳೆಯರು ತಮ್ಮ-ತಮ್ಮ ನಿವಾಸ ಸೇರಿಕೊಂಡರು.
'ನಿನ್ನ ವರ್ತನೆ ಸರಿಯಿಲ್ಲ': ಮದುವೆ ಸಂದರ್ಭದಲ್ಲಿ ನೀಡಿದ ಸಾಲ ಮರುಪಾವತಿಸುವಂತೆ ಅನಂತಬಾಬು ಈ ಸಂದರ್ಭದಲ್ಲಿ ಕೇಳಿದ್ದಾರೆ. ಸ್ವಲ್ಪ ಸಮಯ ಕೊಡಿ, ಕೊಡುತ್ತೇನೆ ಎಂದು ಸುಬ್ರಮಣ್ಯಂ ಹೇಳಿದ್ದಾನೆ. ಮುಂದುವರೆದು, ನಿನ್ನ ವರ್ತನೆ ಬದಲಾಯಿಸಿಕೊಳ್ತಿಲ್ಲ. ನಿನ್ನ ತಾಯಿ ನನ್ನ ಬಳಿ ಬಂದು ನನ್ನ ಮಗನನ್ನು ಕೆಲಸಕ್ಕಿಟ್ಕೊಳ್ಳಿ ಅಂತ ಕೇಳುತ್ತಿದ್ದಾರೆ. ನೀನು ನೋಡು ಕುಡೀತಾ ಸುತ್ತಾಡ್ತಿದೀಯಾ, ನೀನು ಬದಲಾಗಲ್ಲ ಬಿಡು ಎಂದು ಎಮ್‌ಎಲ್‌ಸಿ ಹೇಳಿದ್ದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಆರೋಪಿ ಎಂಎಲ್ಸಿ ಅನಂತಬಾಬು ಬಂಧನ ಕೊಲೆ: ನಿನ್ನ ವರ್ತನೆ ಸರಿಯಿಲ್ಲ ಎಂದು ಸುಬ್ರಮಣ್ಯಂಗೆ ಅನಂತಬಾಬು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದನ್ನು ಸಹಿಸದ ಸುಬ್ರಮಣ್ಯಂ, ಕುಡಿದ ವ್ಯಕ್ತಿಗೆ ಹೊಡೆಯುತ್ತೀಯಾ ಎಂದು ಅನಂತಬಾಬುಗೆ ತಿರುಗಿ ಹೊಡೆಯಲು ಯತ್ನಿಸಿದ್ದಾರೆ. ಇಬ್ಬರೂ ಕಿತ್ತಾಡಿಕೊಂಡು ಅನಂತಬಾಬು ಬಲವಾಗಿ ಸುಬ್ರಮಣ್ಯಂಗೆ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಸುಬ್ರಮಣ್ಯಂನನ್ನು ಅವರೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಆತ ಸಾವನ್ನಪ್ಪಿದ್ದ.
ಇದನ್ನೂ ಓದಿ:ವಿಸ್ಮಯಾ ಕೊಲೆ ಕೇಸ್ನಲ್ಲಿ ಪತಿಯೇ ಅಪರಾಧಿ.. ಕೇರಳ ಕೋರ್ಟ್ನಿಂದ ತೀರ್ಪು
ಸುಬ್ರಮಣ್ಯಂ ಸಾವಿಗೀಡಾಗಿದ್ದಾನೆ ಎನ್ನುವುದನ್ನು ಅರಿತ ಅನಂತಬಾಬು ಈ ಆಘಾತದಿಂದ ಹೊರಬರುವುದು ಹೇಗೆ ಎಂದು ಯೋಚಿಸಿದ್ದಾರೆ. ಈ ಹಿಂದೆಯೂ ಸುಬ್ರಮಣ್ಯಂ ಕುಡಿದು ನಾಲ್ಕು ಬಾರಿ ವಾಹನ ಅಪಘಾತ ಮಾಡಿದ್ದರು. ಪ್ರತಿ ಬಾರಿ ಕುಡಿದು ಅಪಘಾತವಾದಾಗಲೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಯವರಿಗೆ ಅನಂತಬಾಬು ಒಪ್ಪಿಸುತ್ತಿದ್ದರಂತೆ. ಹೀಗಾಗಿ ಇದೊಂದು ಅಪಘಾತದಂತೆ ಸೃಷ್ಟಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಯೋಚಿಸಿದ್ದಾರೆ. ತಮ್ಮ ಆಲೋಚನೆಯ ಪ್ರಕಾರವೇ ಅಪಘಾತವೆಂಬ ನಾಟಕವಾಡಿದ್ದಾರೆ.
ಆರೋಪಿ ಎಂಎಲ್‌ಸಿ ಅನಂತಬಾಬುಗೆ ವೈದ್ಯಕೀಯ ತಪಾಸಣೆ ಅನಂತಬಾಬು ತಮ್ಮಕಾರಿನಲ್ಲೇ ಸುಬ್ರಮಣ್ಯಂ ಶವವನ್ನು ಆತನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಶವ ನೋಡಿದ ಕುಟುಂಬಸ್ಥರು ಇದು ಅಪಘಾತವಲ್ಲ ಎಂದು ಕೊಲೆಯೆಂದೇ ಶಂಕಿಸಿದ್ದಾರೆ. ಎಮ್ಮೆಲ್ಸಿಯನ್ನು ತಡೆದು ವಿಚಾರಿಸಿದಾಗ ಕಾರು ಅಲ್ಲೇ ಬಿಟ್ಟು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಮೃತನ ಪೋಷಕರ ದೂರಿನಂತೆ ಸರ್ಪವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.
ಆರೋಪಿ ವಶಕ್ಕೆ: ಮಾಜಿ ಕಾರು ಚಾಲಕ ಸುಬ್ರಮಣ್ಯಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಹೈಡ್ರಾಮದ ಬಳಿಕ ವೈಕಾಪಾ ಎಂಎಲ್ಸಿ ಅನಂತಬಾಬುನನ್ನು ಪೊಲೀಸರು ವಶಕ್ಕೆ ಪಡೆದರು. ಇಡೀ ಪ್ರಕರಣವನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. ಭಾನುವಾರದಿಂದ ಈ ಸುದ್ದಿ ಸಂಚಲನ ಮೂಡಿಸುತ್ತಿದ್ದರೂ ಅನಂತಬಾಬು ವಶದಲ್ಲಿರುವುದನ್ನು ಪೊಲೀಸರು ಖಚಿತಪಡಿಸಿರಲಿಲ್ಲ.
ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ:ಅನಂತಬಾಬು ಇನ್ನೂ ಪೊಲೀಸರ ವಶದಲ್ಲಿದ್ದಾರೆ. ತನಿಖೆ ವೇಳೆ ಅವರು ತಪ್ಪೊಪ್ಪಿಕೊಂಡಿದ್ದಾರೆ. ಸೋಮವಾರ ಸಂಜೆ ಸರ್ಪವರಂ ಠಾಣೆಯಿಂದ ಕಾಕಿನಾಡ ಜಿ.ಜಿ.ಎಚ್ಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯಕೀಯ ಪರೀಕ್ಷೆಗಳ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಎಂದು ಹೆಚ್ಚುವರಿ ಎಸ್ಪಿ ಶ್ರೀನಿವಾಸ್ ಹೇಳಿದರು.
5 ಲಕ್ಷ ಪರಿಹಾರ: ಹತ್ಯೆಗೀಡಾದ ಸುಬ್ರಮಣ್ಯಂ ಕುಟುಂಬ ಸದಸ್ಯರಿಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಲು ಎಸ್‌ಸಿ ಸಂಘಗಳೊಂದಿಗೆ ಸೇರಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.