ಕರ್ನಾಟಕ

karnataka

ಛತ್ತೀಸ್​ಗಢ ಶಾಸಕರ ಬೆಂಗಾವಲು ವಾಹನದ ಮೇಲೆ ನಕ್ಸಲರ ದಾಳಿ

By

Published : Apr 18, 2023, 8:05 PM IST

ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ಶಾಸಕ ವಿಕ್ರಮ್ ಮಾಂಡವಿ ಅವರ ಬೆಂಗಾವಲು ವಾಹನದ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ.

MLA Vikram Mandavis convoy was attacked by Naxals in Chhattisgarh
ಛತ್ತೀಸ್​ಗಢ ಶಾಸಕರ ಬೆಂಗಾವಲು ವಾಹನದ ಮೇಲೆ ನಕ್ಸಲರ ದಾಳಿ

ಬಿಜಾಪುರ (ಛತ್ತೀಸ್​ಗಢ): ಛತ್ತೀಸ್​ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಿಜಾಪುರ ಶಾಸಕ ವಿಕ್ರಮ್ ಮಾಂಡವಿ ಅವರ ಬೆಂಗಾವಲು ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ಶಾಸಕ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಇಲ್ಲಿನ ಗಂಗಲೂರು ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ನಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ವಿಕ್ರಮ್ ಮಾಂಡವಿ ತಿಳಿಸಿದ್ದಾರೆ. ವಾಹನವೊಂದಕ್ಕೆ ಗುಂಡು ಹಾರಿಸಿದ್ದು ಟೈಯರ್ ಪಂಕ್ಚರ್ ಆಗಿದೆ. ನಾವೆಲ್ಲರೂ ಸುರಕ್ಷಿತವಾಗಿ ಜಿಲ್ಲಾ ಕೇಂದ್ರಕ್ಕೆ ತಲುಪಿದ್ದೇವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಿಲ್ಲದ ನಕ್ಸಲ್​ ಅಟ್ಟಹಾಸ.. ಒಂದೇ ವಾರದಲ್ಲಿ ಮೂವರು ಬಿಜೆಪಿ ಮುಖಂಡರ ಹತ್ಯೆ

ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಈ ಪ್ರದೇಶದಲ್ಲಿ ದಾಳಿಕೋರ ನಕ್ಸಲರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಒಂದೇ ವಾರದಲ್ಲಿ ಮೂವರು ಬಿಜೆಪಿ ಮುಖಂಡರನ್ನು ನಕ್ಸಲರು ಹತ್ಯೆ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ನಕ್ಸಲರು ಟಿಪ್ಪರ್​ವೊಂದಕ್ಕೆ ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು.

ಮತ್ತೊಂದೆಡೆ, ಬಸ್ತಾರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನೆತ್ತರು ಹರಿಸಿದ್ದರು. ಪೊಲೀಸ್​ ಮಾಹಿತಿದಾರರು ಎಂಬ ಶಂಕೆಯ ಮೇಲೆ ಮೂವರು ವ್ಯಾಪಾರಿಗಳಿಗೆ ದೊಣ್ಣೆಗಳಿಂದ ಥಳಿಸಿದ ಪರಿಣಾಮ ಓರ್ವ ವ್ಯಾಪಾರಿ ಮೃತಪಟ್ಟಿದ್ದ ಹಾಗೂ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಗ್ರಾಮಸ್ಥರ ವೇಷದಲ್ಲಿದ್ದ ನಕ್ಸಲರು ದಾಳಿ ಮಾಡಿದ್ದರು. ಈ ಘಟನೆ ನಂತರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದಾಗ ನಕ್ಸಲರೊಂದಿಗೆ ಎನ್​ಕೌಂಟರ್​ ಸಹ ನಡೆದಿತ್ತು.

ಇದನ್ನೂ ಓದಿ:ಪೊಲೀಸ್​ ಮಾಹಿತಿದಾರರೆಂಬ ಶಂಕೆ: ಮೂವರು ವ್ಯಾಪಾರಿಗಳಿಗೆ ನಕ್ಸಲರಿಂದ ಥಳಿತ, ಓರ್ವ ಸಾವು

ಅಪಾರ ಸ್ಫೋಟಕ ಪತ್ತೆ ಹಚ್ಚಿದ್ದ ಪೊಲೀಸರು:ಜೊತೆಗೆ, ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ನಿರಂತರವಾಗಿ ಪೊಲೀಸರು ನಡೆಸಿದ್ದರು. ಏಪ್ರಿಲ್​ 7ರಂದು ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದ ನಕ್ಸಲ್​​ ನಾಯಕರಾದ ಮುಚಾಕಿ ಸುಖರಾಮ್ ಮತ್ತು ಮದ್ವಿ ಕೋಸಾ ಎಂಬುವವರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಇಲ್ಲಿನ ಕುಕನಾರ್ ಅರಣ್ಯದಲ್ಲಿ ನಕ್ಸಲೀಯರು ಸ್ಫೋಟಕ ವಸ್ತುಗಳನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದರ ಮೇರೆಗೆ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಬಂಧಿತ ನಕ್ಸಲರ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಅಂದಾಜು 8-10 ಕೆಜಿಯ ಒಂದು ಟಿಫಿನ್ ಬಾಂಬ್ (ಸುಧಾರಿತ ಸ್ಫೋಟಕ ಸಾಧನ - ಐಇಡಿ), 12 ಎಲೆಕ್ಟ್ರಿಕ್ ಡಿಟೋನೇಟರ್, ಸುಮಾರು 60 ಕೆಜಿ ಅಮೋನಿಯಂ ನೈಟ್ರೇಟ್, ಒಂದು ಎಲೆಕ್ಟ್ರಿಕ್ ಮಲ್ಟಿಮೀಟರ್​ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಅಲ್ಲದೇ, ಬ್ಯಾಟರಿ, ವಿದ್ಯುತ್ ತಂತಿ, ಸ್ವಿಚ್, ಡಿಟೋನೇಟರ್, ಒಂದು ಕಪ್ಪು ಪಿಟ್ಟು ಬ್ಯಾಗ್, ಮೂರು ಚುಚ್ಚುಮದ್ದುಗಳು, ಔಷಧಗಳನ್ನೂ ಜಪ್ತಿ ಮಾಡಿದ್ದರು.

ಇದನ್ನೂ ಓದಿ:ಅರಣ್ಯದಲ್ಲಿ ಇಬ್ಬರು ನಕ್ಸಲ್​ ನಾಯಕರ ಸೆರೆ: ಟಿಫಿನ್ ಬಾಂಬ್ ಸೇರಿ ಸ್ಫೋಟಕಗಳ ಜಪ್ತಿ

ABOUT THE AUTHOR

...view details